الفجر
The Dawn • 30 ayahs • Meccan
بِسْمِ ٱللَّهِ ٱلرَّحْمَٰنِ ٱلرَّحِيمِ
1ಪ್ರಭಾತದ ಮೇಲಾಣೆ!
2ಹತ್ತು ರಾತ್ರಿಗಳ ಮೇಲಾಣೆ![1]
3ಸಮ ಮತ್ತು ಬೆಸಗಳ ಮೇಲಾಣೆ!
4ರಾತ್ರಿಯ ಮೇಲಾಣೆ! ಅದು ಚಲಿಸತೊಡಗುವಾಗ.
5ಇವುಗಳಲ್ಲಿ ಬುದ್ಧಿಯಿರುವವನ ಮಟ್ಟಿಗೆ ಪರ್ಯಾಪ್ತ ಆಣೆಯಿದೆಯೇ?
6ನಿಮ್ಮ ಪರಿಪಾಲಕನು (ಅಲ್ಲಾಹು) ಆದ್ ಗೋತ್ರದವರೊಂದಿಗೆ ಏನು ಮಾಡಿದನೆಂದು ನೀವು ನೋಡಿಲ್ಲವೇ?
7ಸ್ತಂಭಗಳ ಜನರಾದ ಇರಮ್ ಗೋತ್ರದವರೊಂದಿಗೆ.[1]
8ಅವರಂತಿರುವ ಜನರನ್ನು ಯಾವುದೇ ಊರಲ್ಲೂ ಸೃಷ್ಟಿಸಲಾಗಿಲ್ಲ.
9ಕಣಿವೆಯಲ್ಲಿ ಬಂಡೆಗಳನ್ನು ಕೊರೆಯುತ್ತಿದ್ದ ಸಮೂದ್ ಗೋತ್ರದವರೊಂದಿಗೆ.
10ಗೂಟಗಳ ಒಡೆಯನಾದ ಫರೋಹನೊಂದಿಗೆ.[1]
11ಅವರೆಲ್ಲರೂ ಊರುಗಳಲ್ಲಿ ಅತಿರೇಕವೆಸಗುತ್ತಿದ್ದರು.
12ಕಿಡಿಗೇಡಿತನವನ್ನು ಅತಿಯಾಗಿ ಹಬ್ಬಿಸಿದ್ದರು.
13ಕೊನೆಗೆ ನಿಮ್ಮ ಪರಿಪಾಲಕನು (ಅಲ್ಲಾಹು) ಅವರೆಲ್ಲರ ಮೇಲೆ ಶಿಕ್ಷೆಯ ಕೊರಡನ್ನು ಸುರಿಸಿದನು.
14ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ನಿಗಾವಣೆಯಲ್ಲಿದ್ದಾನೆ.[1]
15ಮನುಷ್ಯನ ಸ್ಥಿತಿ ಹೇಗಿದೆಯೆಂದರೆ, ಅವನ ಪರಿಪಾಲಕನು (ಅಲ್ಲಾಹು) ಅವನನ್ನು ಪರೀಕ್ಷಿಸಿ ಅವನಿಗೆ ಗೌರವ ಮತ್ತು ಅನುಗ್ರಹವನ್ನು ದಯಪಾಲಿಸಿದರೆ, ಅವನು ಹೇಳುತ್ತಾನೆ: “ನನ್ನ ಪರಿಪಾಲಕ (ಅಲ್ಲಾಹು) ನನ್ನನ್ನು ಗಣ್ಯ ವ್ಯಕ್ತಿಯಾಗಿ ಮಾಡಿದ್ದಾನೆ.”
16ಆದರೆ ಅವನು ಮನುಷ್ಯನನ್ನು ಪರೀಕ್ಷಿಸಿ ಅವನ ಉಪಜೀವನವನ್ನು ಇಕ್ಕಟ್ಟುಗೊಳಿಸಿದರೆ, ಅವನು ಹೇಳುತ್ತಾನೆ: “ನನ್ನ ಪರಿಪಾಲಕ (ಅಲ್ಲಾಹು) ನನ್ನನ್ನು ನಿಂದನಾರ್ಹನಾಗಿ ಮಾಡಿದ್ದಾನೆ.”
17ಇಲ್ಲವೇ ಇಲ್ಲ, ವಾಸ್ತವವಾಗಿ ನೀವು ಅನಾಥರಿಗೆ ಗೌರವ ನೀಡುವುದಿಲ್ಲ.
18ಬಡವರಿಗೆ ಅನ್ನ ನೀಡಲು ಪರಸ್ಪರ ಉತ್ತೇಜಿಸುವುದಿಲ್ಲ.
19ನೀವು ಉತ್ತರಾಧಿಕಾರದ ಆಸ್ತಿಯನ್ನು ಬಾಚಿ ಬಾಚಿ ತಿನ್ನುತ್ತೀರಿ.
20ನೀವು ಧನವನ್ನು ಅತಿಯಾಗಿ ಪ್ರೀತಿಸುತ್ತೀರಿ.
21ಅಲ್ಲ (ನಿಮ್ಮ ಸ್ಥಿತಿ ಹಾಗಾಗಬಾರದು). ಭೂಮಿಯನ್ನು ಸಂಪೂರ್ಣ ಪುಡಿ ಮಾಡಿ ಸಮತಟ್ಟುಗೊಳಿಸುವಾಗ.
22ನಿಮ್ಮ ಪರಿಪಾಲಕನು (ಅಲ್ಲಾಹು) ಬರುವಾಗ ಮತ್ತು ಸಾಲುಸಾಲಾಗಿ ದೇವದೂತರುಗಳು ಬರುವಾಗ.
23ಆ ದಿನ ನರಕವನ್ನು ತರಲಾಗುವುದು. ಅಂದು ಮನುಷ್ಯನಿಗೆ ಮನವರಿಕೆಯಾಗುವುದು. ಆದರೆ ಆಗ ಮನವರಿಕೆಯಾಗುವುದರಿಂದ ಏನು ಪ್ರಯೋಜನ?
24ಅವನು ಹೇಳುವನು: “ಅಯ್ಯೋ! ನಾನು ನನ್ನ ಈ ಜೀವನಕ್ಕಾಗಿ ಏನಾದರೂ ಸಿದ್ಧತೆಗಳನ್ನು ಮಾಡಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!”
25ಅಂದು ಅಲ್ಲಾಹು ನೀಡುವಂತಹ (ಕಠೋರ) ಶಿಕ್ಷೆಯನ್ನು ನೀಡಲು ಯಾರಿಗೂ ಸಾಧ್ಯವಿಲ್ಲ.
26ಅವನು ಹಿಡಿದು ಬಂಧಿಸುವಂತೆ ಹಿಡಿದು ಬಂಧಿಸಲು ಯಾರಿಗೂ ಸಾಧ್ಯವಿಲ್ಲ.
27ಓ ಸಮಾಧಾನದಲ್ಲಿರುವ ಆತ್ಮವೇ!
28ನಿನ್ನ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳು—ನೀನು ಅವನ ಬಗ್ಗೆ ಸಂಪ್ರೀತನಾಗಿರುವ ಮತ್ತು ಅವನು ನಿನ್ನ ಬಗ್ಗೆ ಸಂಪ್ರೀತನಾಗಿರುವ ಸ್ಥಿತಿಯಲ್ಲಿ.
29ನನ್ನ ವಿಶೇಷ ದಾಸರೊಡನೆ ಸೇರಿಕೋ.
30ನನ್ನ ಸ್ವರ್ಗಕ್ಕೆ ಪ್ರವೇಶಿಸು.