المطففين
The Defrauders • 36 ayahs • Meccan
بِسْمِ ٱللَّهِ ٱلرَّحْمَٰنِ ٱلرَّحِيمِ
1ಅಳತೆ ಮತ್ತು ತೂಕದಲ್ಲಿ ಕಡಿಮೆ ಮಾಡುವವರಿಗೆ ಮಹಾ ನಾಶವಿದೆ.
2ಅವರು ಯಾರೆಂದರೆ ಜನರಿಂದ ಅಳತೆ ಮಾಡಿ ಪಡೆಯುವಾಗ ಪೂರ್ಣವಾಗಿ ಪಡೆಯುವವರು.
3ಆದರೆ ಜನರಿಗೆ ಅಳತೆ ಮಾಡಿ ಕೊಡುವಾಗ ಅಥವಾ ತೂಕ ಮಾಡಿ ಕೊಡುವಾಗ ಕಡಿಮೆ ಮಾಡುವವರು.
4ಮರಣಾನಂತರ ಅವರಿಗೆ ಪುನಃ ಜೀವ ನೀಡಿ ಎಬ್ಬಿಸಲಾಗುವುದೆಂಬ ಪ್ರಜ್ಞೆ ಅವರಿಗಿಲ್ಲವೇ?
5ಆ ಮಹಾ ದಿನಕ್ಕಾಗಿ.
6ಜನರೆಲ್ಲರೂ ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಮುಂದೆ ಎದ್ದು ನಿಲ್ಲುವ ದಿನ.
7ನಿಶ್ಚಯವಾಗಿಯೂ ದುಷ್ಕರ್ಮಿಗಳ ಕರ್ಮದಾಖಲೆಯು ಸಿಜ್ಜೀನ್‍ನಲ್ಲಿದೆ.
8ಸಿಜ್ಜೀನ್ ಏನೆಂದು ನಿಮಗೇನು ಗೊತ್ತು?
9ಅದು ನಮೂದಿಸಲಾದ ಪುಸ್ತಕವಾಗಿದೆ.
10ಅಂದು ನಿಷೇಧಿಸಿದವರಿಗೆ ಮಹಾ ನಾಶವಿದೆ.
11ಅವರು ಯಾರೆಂದರೆ ಪ್ರತಿಫಲ ದಿನವನ್ನು ನಿಷೇಧಿಸುವವರು.
12ಎಲ್ಲೆ ಮೀರಿ ನಡೆಯುವವರು ಮತ್ತು ಮಹಾಪಾಪಿಗಳ ಹೊರತು ಇನ್ನಾರೂ ಅದನ್ನು ನಿಷೇಧಿಸುವುದಿಲ್ಲ.
13ಅವನಿಗೆ ನಮ್ಮ ವಚನಗಳನ್ನು ಓದಿಕೊಡಲಾದರೆ ಅದನ್ನು “ಪ್ರಾಚೀನ ಕಾಲದ ಜನರ ಪುರಾಣಗಳು” ಎನ್ನುತ್ತಾನೆ.
14ಅಲ್ಲ, ಅವರು ಮಾಡುತ್ತಿದ್ದ ದುಷ್ಕರ್ಮಗಳ ಕಾರಣ ಕಪ್ಪುಕಲೆಗಳು ಅವರ ಹೃದಯಗಳನ್ನು ಆವರಿಸಿಕೊಂಡಿವೆ.
15ಅಲ್ಲ, ಅಂದು ಅವರು ಅವರ ಪರಿಪಾಲಕನನ್ನು (ಅಲ್ಲಾಹನನ್ನು) ದರ್ಶಿಸದಂತೆ ಪರದೆಯಲ್ಲಿ ಹಾಕಲಾಗುವರು.[1]
16ನಂತರ ನಿಶ್ಚಯವಾಗಿಯೂ ಅವರನ್ನು ಧಗಧಗಿಸುವ ನರಕಕ್ಕೆ ಎಸೆಯಲಾಗುವುದು.
17ನಂತರ ಅವರೊಡನೆ ಹೇಳಲಾಗುವುದು: “ಇದೇ ನೀವು ನಿಷೇಧಿಸುತ್ತಿದ್ದ ನರಕ.”
18ಇಲ್ಲವೇ ಇಲ್ಲ. ನಿಶ್ಚಯವಾಗಿಯೂ ಸಜ್ಜನರ ಕರ್ಮದಾಖಲೆಯು ಇಲ್ಲಿಯ್ಯೂನ್‍ನಲ್ಲಿದೆ.
19ಇಲ್ಲಿಯ್ಯೂನ್ ಏನೆಂದು ನಿಮಗೇನು ಗೊತ್ತು?
20ಅದು ನಮೂದಿಸಲಾದ ಪುಸ್ತಕವಾಗಿದೆ.
21ಸಾಮೀಪ್ಯ ಪಡೆದವರು (ದೇವದೂತರು) ಅದರ ಬಳಿ ಉಪಸ್ಥಿತರಾಗುವರು.
22ನಿಶ್ಚಯವಾಗಿಯೂ ಸಜ್ಜನರು ಸುಖಾಡಂಬರಗಳಲ್ಲಿರುವರು.
23ಸುಖಾಸನಗಳಲ್ಲಿ ಕುಳಿತು ನೋಡುತ್ತಿರುವರು.
24ನೀವು ಅವರ ಮುಖಗಳಲ್ಲಿ ಆ ಸುಖಗಳ ಹೊಳಪನ್ನು ಗುರುತಿಸುವಿರಿ.
25ಅವರಿಗೆ ಮೊಹರು ಹಾಕಲಾದ ಶುದ್ಧ ಮದ್ಯವನ್ನು ಕುಡಿಯಲು ನೀಡಲಾಗುವುದು.
26ಅದರ ಮೊಹರು ಕಸ್ತೂರಿಯಾಗಿದೆ. ಪೈಪೋಟಿ ನಡೆಸುವವರು ಇದಕ್ಕಾಗಿ ಪೈಪೋಟಿ ನಡೆಸಲಿ.
27ಅದರ ಮಿಶ್ರಣವು ತಸ್ನೀಮ್[1] ಆಗಿದೆ.
28ಅಂದರೆ ಸಾಮೀಪ್ಯ ಪಡೆದವರು ಕುಡಿಯುವ ಚಿಲುಮೆಯ ನೀರು.
29ನಿಶ್ಚಯವಾಗಿಯೂ (ಇಹಲೋಕದಲ್ಲಿ) ಅಪರಾಧಿಗಳು ಸತ್ಯವಿಶ್ವಾಸಿಗಳನ್ನು ತಮಾಷೆ ಮಾಡಿ ನಗುತ್ತಿದ್ದರು.
30ಅವರು ಸತ್ಯವಿಶ್ವಾಸಿಗಳ ಬಳಿಯಿಂದ ಹೋಗುವಾಗ ಒಬ್ಬರು ಇನ್ನೊಬ್ಬರಿಗೆ ಕಣ್ಣಿನಿಂದ ಸನ್ನೆ ಮಾಡುತ್ತಿದ್ದರು.
31ಅವರ ತಮ್ಮ ಮನೆಯವರ ಬಳಿಗೆ ಮರಳುವಾಗ ಮೋಜು ಮಾಡುತ್ತಾ ಮರಳುತ್ತಿದ್ದರು.
32ಸತ್ಯವಿಶ್ವಾಸಿಗಳನ್ನು ಕಂಡರೆ, “ನಿಶ್ಚಯವಾಗಿಯೂ ಇವರೆಲ್ಲರೂ ದಾರಿತಪ್ಪಿದವರು” ಎನ್ನುತ್ತಿದ್ದರು.
33ಇವರನ್ನು ಅವರ (ಸತ್ಯವಿಶ್ವಾಸಿಗಳ) ಕಾವಲುಗಾರರಾಗಿ ಮಾಡಿ ಕಳುಹಿಸಲಾಗಿಲ್ಲ.
34ಆದರೆ ಇಂದು ಸತ್ಯವಿಶ್ವಾಸಿಗಳು ಸತ್ಯನಿಷೇಧಿಗಳನ್ನು ನೋಡಿ ನಗುವರು.
35ಅವರು ಸುಖಾಸನಗಳಲ್ಲಿ ಕುಳಿತು ನೋಡುತ್ತಿರುವರು.
36ಆ ಸತ್ಯನಿಷೇಧಿಗಳಿಗೆ ಅವರು ಮಾಡಿದ ದುಷ್ಕರ್ಮಗಳ ಪ್ರತಿಫಲವನ್ನು ಪೂರ್ಣವಾಗಿ ನೀಡಲಾಗಿದೆಯೋ ಎಂದು.