عبس
He Frowned • 42 ayahs • Meccan
بِسْمِ ٱللَّهِ ٱلرَّحْمَٰنِ ٱلرَّحِيمِ
1ಅವರು (ಪ್ರವಾದಿ) ಮುಖ ಸಿಂಡರಿಸಿದರು ಮತ್ತು ವಿಮುಖರಾದರು.
2ಒಬ್ಬ ಕುರುಡ ಅವರ ಬಳಿಗೆ ಬಂದರು ಎಂಬ ಕಾರಣದಿಂದ.[1]
3(ಪ್ರವಾದಿಯವರೇ!) ನಿಮಗೇನು ಗೊತ್ತು? ಆ ಕುರುಡರು ಪರಿಶುದ್ಧತೆಯನ್ನು ಪಡೆಯಬಹುದು.
4ಅಥವಾ ಉಪದೇಶಕ್ಕೆ ಕಿವಿಗೊಟ್ಟು, ಆ ಉಪದೇಶವು ಅವರಿಗೆ ಪ್ರಯೋಜನವಾಗಬಹುದು.
5ಆದರೆ ಯಾರು ತನ್ನನ್ನು ತಾನೇ ಸ್ವಯಂ-ಪರ್ಯಾಪ್ತನೆಂದು ಪರಿಗಣಿಸುತ್ತಾನೋ,
6ಅವನ ಕಡೆಗೆ ನೀವು ಪೂರ್ಣ ಗಮನ ಹರಿಸಿದಿರಿ.[1]
7ಅವನು ಪರಿಶುದ್ಧತೆಯನ್ನು ಪಡೆಯದಿದ್ದರೆ ನಿಮಗೇನೂ ದೋಷವಿಲ್ಲ.
8ಆದರೆ ಯಾರು ನಿಮ್ಮ ಬಳಿಗೆ ಓಡುತ್ತಾ ಬಂದರೋ,
9ಅಲ್ಲಾಹನನ್ನು ಭಯಪಡುವ ಸ್ಥಿತಿಯಲ್ಲಿ,
10ಅವರ ಬಗ್ಗೆ ನೀವು ಅಸಡ್ಡೆ ತೋರಿದಿರಿ.
11ಅಲ್ಲ. ನಿಶ್ಚಯವಾಗಿಯೂ ಇದು (ಕುರ್‌ಆನ್) ಒಂದು ಉಪದೇಶವಾಗಿದೆ.
12ಇಚ್ಛೆಯುಳ್ಳವರು ಅದರಿಂದ ಉಪದೇಶ ಪಡೆಯಲಿ.
13ಅದು ಪ್ರತಿಷ್ಠಿತ ಗ್ರಂಥದಲ್ಲಿದೆ.
14ಉನ್ನತವಾದ ಮತ್ತು ಪರಿಶುದ್ಧವಾದ (ಗ್ರಂಥದಲ್ಲಿ).
15ಅದು ದೇವದೂತರುಗಳ ಕೈಗಳಲ್ಲಿವೆ.
16ಗಣ್ಯರು ಮತ್ತು ನೀತಿವಂತರಾದ (ದೇವದೂತರುಗಳು).
17ಮನುಷ್ಯನ ಮೇಲೆ ಅಲ್ಲಾಹನ ಶಾಪವಿರಲಿ! ಅವನು ಎಷ್ಟೊಂದು ಕೃತಜ್ಞತೆಯಿಲ್ಲದವನಾಗಿ ಬಿಟ್ಟಿದ್ದಾನೆ!
18ಅಲ್ಲಾಹು ಅವನನ್ನು ಯಾವ ವಸ್ತುವಿನಿಂದ ಸೃಷ್ಟಿಸಿದನು?
19ಅವನನ್ನು ವೀರ್ಯದಿಂದ ಸೃಷ್ಟಿಸಿದನು. ನಂತರ ಅವನನ್ನು ನಿರ್ಣಯಿಸಿದನು.
20ನಂತರ ಅವನಿಗೆ ಮಾರ್ಗವನ್ನು ಸುಗಮಗೊಳಿಸಿದನು.
21ನಂತರ ಅವನಿಗೆ ಮರಣವನ್ನು ನೀಡಿ ಸಮಾಧಿಯಲ್ಲಿ ದಫನ ಮಾಡಿಸಿದನು.
22ನಂತರ ಅವನು ಇಚ್ಛಿಸುವಾಗ ಅವನಿಗೆ ಪುನಃ ಜೀವ ನೀಡಿ ಎಬ್ಬಿಸುವನು.
23ಇಲ್ಲವೇ ಇಲ್ಲ. ಅವನು ಇಲ್ಲಿಯ ತನಕ ಅಲ್ಲಾಹನ ಆಜ್ಞೆಗಳನ್ನು ಪಾಲಿಸಲಿಲ್ಲ.
24ಮನುಷ್ಯನು ತನ್ನ ಆಹಾರವನ್ನು ನೋಡಲಿ.
25ನಾವು ರಭಸವಾಗಿ ಮಳೆಯನ್ನು ಸುರಿಸಿದೆವು.
26ನಂತರ ಭೂಮಿಯನ್ನು ಸರಿಯಾದ ರೀತಿಯಲ್ಲಿ ಸೀಳಿದೆವು.
27ನಂತರ ಅದರಲ್ಲಿ ಧಾನ್ಯವನ್ನು ಬೆಳೆಸಿದೆವು.
28ದ್ರಾಕ್ಷಿ ಮತ್ತು ತರಕಾರಿಗಳನ್ನು,
29ಆಲಿವ್ ಮತ್ತು ಖರ್ಜೂರ ಮರಗಳನ್ನು,
30ದಟ್ಟವಾದ ತೋಟಗಳನ್ನು.
31ಹಣ್ಣು-ಹಂಪಲುಗಳನ್ನು ಮತ್ತು ಹುಲ್ಲುಗಾವಲುಗಳನ್ನು.
32ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿ.
33ಕಿವಿಯನ್ನು ಕಿವುಡುಗೊಳಿಸುವ ಆ ಸದ್ದು (ಪುನರುತ್ಥಾನ) ಬಂದಾಗ.
34ಅಂದು ಮನುಷ್ಯನು ತನ್ನ ಸಹೋದರನಿಂದ ದೂರ ಓಡುವನು.
35ತನ್ನ ತಂದೆ-ತಾಯಿಗಳಿಂದ.
36ತನ್ನ ಮಡದಿ-ಮಕ್ಕಳಿಂದ.
37ಅಂದು ಅವರಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಇತರರ ಕಡೆಗೆ ಗಮನಕೊಡಲಾಗದಷ್ಟು ತನ್ನದೇ ಆದ ಆಲೋಚನೆಗಳಿರುವುವು.
38ಅಂದು ಬಹಳಷ್ಟು ಮುಖಗಳು ಪ್ರಸನ್ನವಾಗಿರುವುವು.
39ಅವು ಕಿಲಕಿಲ ನಗುತ್ತಿರುವುವು ಮತ್ತು ಸಂತೋಷದಿಂದಿರುವುವು.
40ಅಂದು ಬಹಳಷ್ಟು ಮುಖಗಳಿಗೆ ಧೂಳು ಮೆತ್ತಿಕೊಂಡಿರುವುದು.
41ಅವುಗಳನ್ನು ಕಾರ್ಗತ್ತಲೆಯು ಕವಿದಿರುವುದು.
42ಅವರೇ ಸತ್ಯನಿಷೇಧಿಗಳು ಮತ್ತು ದುಷ್ಕರ್ಮಿಗಳು.