المعارج
The Ascending Stairways • 44 ayahs • Meccan
بِسْمِ ٱللَّهِ ٱلرَّحْمَٰنِ ٱلرَّحِيمِ
1ಸಂಭವಿಸಲಿರುವ ಶಿಕ್ಷೆಯ ಬಗ್ಗೆ ಕೇಳುಗನೊಬ್ಬನು ಕೇಳಿದನು.
2ಸತ್ಯನಿಷೇಧಿಗಳಿಗೆ (ಸಂಭವಿಸುವ ಶಿಕ್ಷೆ). ಅದನ್ನು ನಿವಾರಿಸುವವರಾರೂ ಇಲ್ಲ.
3ಆರೋಹಣ ದಾರಿಗಳ ಒಡೆಯನಾದ ಅಲ್ಲಾಹನಿಂದ (ಸಂಭವಿಸಲಿರುವ ಶಿಕ್ಷೆ).
4ಐವತ್ತು ಸಾವಿರ ವರ್ಷಗಳ ಗಾತ್ರವನ್ನು ಹೊಂದಿರುವ ಒಂದು ದಿನದಲ್ಲಿ ದೇವದೂತರು ಮತ್ತು ರೂಹ್ ಅವನ ಬಳಿಗೆ ಏರಿಹೋಗುತ್ತಾರೆ.
5ಆದ್ದರಿಂದ ನೀವು ಉತ್ತಮ ರೀತಿಯಲ್ಲಿ ತಾಳ್ಮೆ ತೋರಿರಿ.
6ನಿಶ್ಚಯವಾಗಿಯೂ ಅವರು ಅದನ್ನು ದೂರದಲ್ಲಿರುವಂತೆ ಕಾಣುತ್ತಿದ್ದಾರೆ.
7ಆದರೆ ನಾವು ಅದನ್ನು ಸಮೀಪದಲ್ಲಿರುವಂತೆ ಕಾಣುತ್ತಿದ್ದೇವೆ.
8ಆಕಾಶವು ಎಣ್ಣೆಯ ಮಡ್ಡಿಯಂತಾಗುವ ದಿನ.
9ಪರ್ವತಗಳು ಬಣ್ಣದ ತುಪ್ಪಳದಂತಾಗುವ ದಿನ.
10ಯಾವುದೇ ಒಬ್ಬ ಗೆಳೆಯನು ತನ್ನ ಆತ್ಮೀಯ ಗೆಳೆಯನ ಬಗ್ಗೆ ಕೇಳುವುದಿಲ್ಲ.
11ವಾಸ್ತವವಾಗಿ ಅವರನ್ನು ಪರಸ್ಪರ ತೋರಿಸಲಾಗುವುದು. ಅಪರಾಧಿಯು ಆಶಿಸುವನು—ಅಂದಿನ ಶಿಕ್ಷೆಗೆ ಬದಲಿಯಾಗಿ ತನ್ನ ಗಂಡುಮಕ್ಕಳನ್ನು,
12ತನ್ನ ಪತ್ನಿಯನ್ನು ಮತ್ತು ಸಹೋದರನನ್ನು,
13ತನಗೆ ಆಶ್ರಯ ನೀಡಿದ ತನ್ನ ಕುಟುಂಬವನ್ನು,
14ಮತ್ತು ಭೂಮಿಯಲ್ಲಿರುವ ಎಲ್ಲರನ್ನೂ ಪರಿಹಾರವಾಗಿ ನೀಡಿ ಅದು ತನ್ನನ್ನು ಪಾರು ಮಾಡುತ್ತಿದ್ದರೆ (ಎಷ್ಟು ಚೆನ್ನಾಗಿತ್ತು)!
15ಎಂದಿಗೂ ಇಲ್ಲ! ನಿಶ್ಚಯವಾಗಿಯೂ ಅದು ಧಗಧಗಿಸುವ ಬೆಂಕಿಯಾಗಿದೆ.
16ತಲೆಯ ಚರ್ಮವನ್ನು ಸುಲಿಯುವಂತಹ ಬೆಂಕಿ.
17ಹಿಂದಕ್ಕೆ ಸರಿದ ಮತ್ತು ಮುಖ ತಿರುಗಿಸಿ ನಡೆದ ಎಲ್ಲರನ್ನೂ ಅದು ಕರೆಯುತ್ತದೆ.
18(ಆಸ್ತಿಯನ್ನು) ಕೂಡಿಟ್ಟು ಜೋಪಾನವಾಗಿಟ್ಟವನನ್ನೂ (ಕರೆಯುತ್ತದೆ).
19ನಿಶ್ಚಯವಾಗಿಯೂ ಮನುಷ್ಯನನ್ನು ಚಿಂತಾಕ್ರಾಂತನಾಗಿ ಸೃಷ್ಟಿಸಲಾಗಿದೆ.
20ಅವನಿಗೆ ವಿಪತ್ತು ಸಂಭವಿಸಿದರೆ ತಾಳ್ಮೆಗೆಡುತ್ತಾನೆ.
21ಅವನಿಗೆ ಆರಾಮ ದೊರೆತರೆ ಜಿಪುಣನಾಗುತ್ತಾನೆ.
22ಆದರೆ ನಮಾಝ್ ನಿರ್ವಹಿಸುವವರು ಇದಕ್ಕೆ ಹೊರತಾಗಿದ್ದಾರೆ.
23ಅವರು ಯಾರೆಂದರೆ ತಮ್ಮ ನಮಾಝ್‌ನಲ್ಲಿ ಸ್ಥಿರವಾಗಿರುವವರು.
24ತಮ್ಮ ಸಂಪತ್ತಿನಲ್ಲಿ ಒಂದು ನಿಶ್ಚಿತ ಹಕ್ಕು ಇರುವವರು.
25ಬೇಡುವವನಿಗೆ ಮತ್ತು (ಉಪಜೀವನ) ತಡೆಯಲ್ಪಟ್ಟವನಿಗೆ.
26ಅವರು ಪ್ರತಿಫಲದ ದಿನವನ್ನು ಸತ್ಯವೆಂದು ದೃಢೀಕರಿಸುವವರು.
27ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆಯ ಬಗ್ಗೆ ಭಯಪಡುವವರು.
28ನಿಶ್ಚಯವಾಗಿಯೂ ಅವರ ಪರಿಪಾಲಕನ (ಅಲ್ಲಾಹನ) ಶಿಕ್ಷೆಯು ಭಯಪಡದೇ ಇರುವಂತದ್ದಲ್ಲ.
29ಅವರು ತಮ್ಮ ಗುಹ್ಯಾಂಗಗಳನ್ನು ಕಾಪಾಡಿಕೊಳ್ಳುವವರು.
30ಅವರ ಪತ್ನಿಯರು ಅಥವಾ ಅವರ ಬಲಗೈಗಳು ಅಧೀನದಲ್ಲಿರಿಸಿದವರನ್ನು ಬಿಟ್ಟು. ನಿಶ್ಚಯವಾಗಿಯೂ ಅವರು ಆಕ್ಷೇಪಾರ್ಹರಲ್ಲ.
31ಆದರೆ ಯಾರು ಅದಕ್ಕಿಂತ ಆಚೆಗಿರುವುದನ್ನು ಹುಡುಕುತ್ತಾರೋ ಅವರೇ ಎಲ್ಲೆ ಮೀರಿದವರು.
32ಅವರು ತಮ್ಮ ವಿಶ್ವಾಸಾರ್ಹತೆಗಳನ್ನು ಮತ್ತು ಕರಾರುಗಳನ್ನು ಪಾಲಿಸುವವರು.
33ಅವರು ತಮ್ಮ ಸಾಕ್ಷಿಗಳಲ್ಲಿ ನೇರವಾಗಿ ನಿಲ್ಲುವವರು.
34ಅವರು ತಮ್ಮ ನಮಾಝ್‌ಗಳನ್ನು ಸಂರಕ್ಷಿಸುವವರು.
35ಅವರು ಸ್ವರ್ಗಗಳಲ್ಲಿ ಗೌರವಿಸಲ್ಪಡುವರು.
36ಸತ್ಯನಿಷೇಧಿಗಳಿಗೇನಾಗಿದೆ? ಅವರೇಕೆ ನಿಮ್ಮ ಕಡೆಗೆ ಅವಸರದಿಂದ ಬರುತ್ತಿದ್ದಾರೆ?
37ಗುಂಪು ಗುಂಪಾಗಿ ಬಲಭಾಗದಿಂದ ಮತ್ತು ಎಡಭಾಗದಿಂದ?[1]
38ತನ್ನನ್ನು ಸುಖಸಮೃದ್ಧವಾದ ಸ್ವರ್ಗಕ್ಕೆ ಪ್ರವೇಶ ಮಾಡಿಸಬೇಕೆಂದು ಅವರಲ್ಲಿ ಪ್ರತಿಯೊಬ್ಬನೂ ಹಾರೈಸುತ್ತಾನೆಯೇ?
39ಎಂದಿಗೂ ಇಲ್ಲ; ನಾವು ಅವರನ್ನು ಅವರು ತಿಳಿದಿರುವ ವಸ್ತುವಿನಿಂದಲೇ ಸೃಷ್ಟಿಸಿದ್ದೇವೆ.
40ಆದ್ದರಿಂದ ನಾನು ಪೂರ್ವಗಳ ಮತ್ತು ಪಶ್ಚಿಮಗಳ ಪರಿಪಾಲಕನ (ಅಲ್ಲಾಹನ) ಮೇಲೆ ಆಣೆ ಮಾಡುತ್ತೇನೆ. ನಿಶ್ಚಯವಾಗಿಯೂ ನಮಗೆ ಸಾಮರ್ಥ್ಯವಿದೆ.
41ಅವರ ಬದಲಿಗೆ ಅವರಿಗಿಂತ ಶ್ರೇಷ್ಟರನ್ನು ತರಲು. ನಮ್ಮನ್ನು ಯಾರಿಗೂ ಸೋಲಿಸಲಾಗದು.
42ಆದ್ದರಿಂದ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಅವರು ಅನಗತ್ಯ ಮಾತುಗಳಲ್ಲಿ ಮತ್ತು ಆಟದಲ್ಲಿ ಮಗ್ನರಾಗಲಿ. ಎಲ್ಲಿಯವರೆಗೆಂದರೆ, ಅವರಿಗೆ ವಾಗ್ದಾನ ಮಾಡಲಾಗುವ ಆ ದಿನವನ್ನು ಅವರು ಭೇಟಿಯಾಗುವ ತನಕ.
43ಅವರು ಸಮಾಧಿಗಳಿಂದ ತರಾತುರಿಯಲ್ಲಿ ಹೊರಟುಬರುವ ದಿನ! ಅವರು ಒಂದು ಗುರಿಯೆಡೆಗೆ ವೇಗವಾಗಿ ಸಾಗುವಂತೆ.
44ಅವರ ಕಣ್ಣುಗಳು ತಗ್ಗಿಕೊಂಡಿರುವುವು. ಅವಮಾನವು ಅವರನ್ನು ಆವರಿಸಿಕೊಳ್ಳುವುದು. ಅದೇ ಅವರಿಗೆ ವಾಗ್ದಾನ ಮಾಡಲಾಗುತ್ತಿದ್ದ ದಿನ.