القلم
The Pen • 52 ayahs • Meccan
بِسْمِ ٱللَّهِ ٱلرَّحْمَٰنِ ٱلرَّحِيمِ
1ನೂನ್. ಲೇಖನಿ ಮತ್ತು ಅವರು (ದೇವದೂತರುಗಳು) ಬರೆಯುವುದರ ಮೇಲಾಣೆ!
2ನಿಮ್ಮ ಪರಿಪಾಲಕನ (ಅಲ್ಲಾಹನ) ಅನುಗ್ರಹದಿಂದಾಗಿ ನೀವು ಮಾನಸಿಕ ಅಸ್ವಸ್ಥರಲ್ಲ.
3ನಿಶ್ಚಯವಾಗಿಯೂ ನಿಮಗೆ ಎಂದೂ ಮುಗಿಯದ ಪ್ರತಿಫಲವಿದೆ.
4ನಿಶ್ಚಯವಾಗಿಯೂ ನೀವು ಶ್ರೇಷ್ಠ ಗುಣ ನಡವಳಿಕೆಯಲ್ಲಿದ್ದೀರಿ.
5ಆದ್ದರಿಂದ ನೀವು ನೋಡುವಿರಿ ಮತ್ತು ಅವರು ಕೂಡ ನೋಡುವರು.
6ನಿಮ್ಮಲ್ಲಿ ಕ್ಷೋಭೆಗೆ ಬಲಿಯಾದವರು ಯಾರೆಂದು.
7ನಿಶ್ಚಯವಾಗಿಯೂ ತನ್ನ ಮಾರ್ಗದಿಂದ ತಪ್ಪಿಹೋದವರ ಬಗ್ಗೆ ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ. ಸನ್ಮಾರ್ಗ ಪಡೆದವರ ಬಗ್ಗೆಯೂ ಅವನಿಗೆ ಬಹಳ ಚೆನ್ನಾಗಿ ತಿಳಿದಿದೆ.
8ಆದ್ದರಿಂದ ನೀವು ಸತ್ಯನಿಷೇಧಿಗಳ ಮಾತನ್ನು ಕೇಳಬೇಡಿ.
9ನೀವು ಸ್ವಲ್ಪ ಮೃದುವಾದರೆ ಅವರು ಕೂಡ ಮೃದುವಾಗುತ್ತಾರೆ ಎಂದು ಅವರು ಬಯಸುತ್ತಾರೆ.[1]
10ನೀವು ಎಲ್ಲಾ ಪದೇ ಪದೇ ಆಣೆ ಮಾಡುವ ನೀಚರ ಮಾತನ್ನು ಕೇಳಬೇಡಿ.
11(ಅಂದರೆ) ಚುಚ್ಚಿ ಮಾತನಾಡುವವನು ಮತ್ತು ಚಾಡಿಯೊಂದಿಗೆ ನಡೆಯುವವನು.
12ಒಳಿತಿಗೆ ಅಡ್ಡಿಪಡಿಸುವವನು, ಎಲ್ಲೆ ಮೀರಿದವನು ಮತ್ತು ಕಡುಪಾಪಿಯಾಗಿರುವವನು.
13ಒರಟನು, ಮಾತ್ರವಲ್ಲದೆ ಕುಲಕ್ಕೆ ಸೇರದವನು.[1]
14ಅವನಿಗೆ ಆಸ್ತಿ ಮತ್ತು ಗಂಡು ಮಕ್ಕಳಿರುವುದೇ ಅವನ (ಈ ದುರ್ನಡತೆಗೆ) ಕಾರಣವಾಗಿದೆ.
15ಅವನಿಗೆ ನಮ್ಮ ವಚನಗಳನ್ನು ಓದಿಕೊಡಲಾದರೆ, ಅದನ್ನು ಪ್ರಾಚೀನ ಕಾಲದವರ ಪುರಾಣಗಳು ಎಂದು ಹೇಳುತ್ತಾನೆ.
16ನಾವು ಅವನ ಮೂಗಿನ ಮೇಲೆ ಬರೆ ಹಾಕುವೆವು.
17ನಿಶ್ಚಯವಾಗಿಯೂ ಆ ತೋಟದ ಜನರನ್ನು ಪರೀಕ್ಷಿಸಿದಂತೆ ನಾವು ಅವರನ್ನೂ ಪರೀಕ್ಷಿಸಿದೆವು. ಬೆಳಗಾಗುತ್ತಿದ್ದಂತೆ ತೋಟದ ಹಣ್ಣುಗಳನ್ನು ನಾವು ಖಂಡಿತ ಕೊಯ್ಯುವೆವು ಎಂದು ಅವರು ಆಣೆ ಮಾಡಿ ಹೇಳಿದ ಸಂದರ್ಭ.
18ಆದರೆ ಅವರು ಇನ್‌ಶಾ ಅಲ್ಲಾಹ್ (ಅಲ್ಲಾಹು ಇಚ್ಛಿಸಿದರೆ) ಎಂದು ಹೇಳಲಿಲ್ಲ.
19ಆದ್ದರಿಂದ, ಅವರು ನಿದ್ದೆಯಲ್ಲಿದ್ದಾಗಲೇ (ರಾತ್ರೋರಾತ್ರಿ) ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಒಂದು ಶಿಕ್ಷೆಯು ಆ ತೋಟವನ್ನು ನಾಲ್ಕೂ ಕಡೆಯಿಂದ ಸುತ್ತಿತು.
20ಆಗ ಆ ತೋಟವು ಕಟಾವು ಮಾಡಿದ ಹೊಲದಂತಾಯಿತು.
21ಬೆಳಗಾಗುತ್ತಿದ್ದಂತೆ ಅವರು ಒಬ್ಬರನ್ನೊಬ್ಬರು ಕೂಗಿ ಕರೆದು ಹೇಳಿದರು:
22“ನಿಮಗೆ ಹಣ್ಣು ಕೊಯ್ಯಬೇಕೆಂದಿದ್ದರೆ ಬೆಳಿಗ್ಗೆಯೇ ನಿಮ್ಮ ತೋಟಕ್ಕೆ ಹೊರಡಿ.”
23ನಂತರ ಅವರು ಪರಸ್ಪರ ಗುಟ್ಟಾಗಿ ಈ ಮಾತುಗಳನ್ನು ಹೇಳುತ್ತಾ ಹೊರಟರು:
24“ಇಂದು ನಿಮ್ಮ ಬಳಿಗೆ ಯಾವುದೇ ಬಡವ ಬರುವಂತಾಗಬಾರದು.”
25ಅವರು ಒಂದು ನಿರ್ಧಾರದೊಂದಿಗೆ (ಅದನ್ನು ಜಾರಿಗೊಳಿಸುವ) ಪೂರ್ಣ ಸಾಮರ್ಥ್ಯವಿದೆಯೆಂದು ಪರಿಗಣಿಸಿ ಬೆಳಗ್ಗೆಯೇ ಹೊರಟರು.
26ಆದರೆ ಅವರು ಆ ತೋಟವನ್ನು ನೋಡಿದಾಗ ಅವರು ಹೇಳಿದರು: “ನಿಶ್ಚಯವಾಗಿಯೂ ನಮಗೆ ದಾರಿ ತಪ್ಪಿದೆ.
27ಅಲ್ಲ, ನಮಗೆ ಅದೃಷ್ಟ ಕೈಕೊಟ್ಟಿದೆ.”
28ಅವರಲ್ಲಿದ್ದ ಉತ್ತಮ ವ್ಯಕ್ತಿ ಹೇಳಿದನು: “ನೀವೇಕೆ ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡುವುದಿಲ್ಲ ಎಂದು ನಾನು ನಿಮ್ಮೊಡನೆ ಕೇಳಲಿಲ್ಲವೇ?”
29ಅವರು ಹೇಳಿದರು: “ನಮ್ಮ ಪರಿಪಾಲಕನ (ಅಲ್ಲಾಹನ) ಪರಿಶುದ್ಧಿಯನ್ನು ನಾವು ಕೊಂಡಾಡುತ್ತೇವೆ. ನಿಶ್ಚಯವಾಗಿಯೂ ನಾವು ಅಕ್ರಮಿಗಳಾಗಿದ್ದೇವೆ.”
30ನಂತರ ಅವರು ಒಬ್ಬರಿಗೊಬ್ಬರು ಮುಖ ಮಾಡಿ ಪರಸ್ಪರ ಆರೋಪ ಹೊರಿಸತೊಡಗಿದರು.
31ಅವರು ಹೇಳಿದರು: “ಓ ನಮ್ಮ ದುರ್ಗತಿಯೇ! ನಿಶ್ಚಯವಾಗಿಯೂ ನಾವು ಅತಿರೇಕಿಗಳಾಗಿದ್ದೆವು.
32ನಮ್ಮ ಪರಿಪಾಲಕನು (ಅಲ್ಲಾಹು) ನಮಗೆ ಇದಕ್ಕಿಂತಲೂ ಉತ್ತಮವಾದುದನ್ನು ಬದಲಿಯಾಗಿ ನೀಡಬಹುದು. ನಿಶ್ಚಯವಾಗಿಯೂ ನಾವು ನಮ್ಮ ಪರಿಪಾಲಕನ (ಅಲ್ಲಾಹನ) ಬಗ್ಗೆ ಆಶಾವಾದಿಗಳಾಗಿದ್ದೇವೆ.”
33ಶಿಕ್ಷೆಯು ಹೀಗೆಯೇ ಆಗಿದೆ. ಪರಲೋಕದ ಶಿಕ್ಷೆಯು ಅತಿದೊಡ್ಡದಾಗಿದೆ. ಅವರು ಅದನ್ನು ತಿಳಿಯುತ್ತಿದ್ದರೆ!
34ನಿಶ್ಚಯವಾಗಿಯೂ, ದೇವಭಯವುಳ್ಳವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಸುಖಾಡಂಬರಗಳಿಂದ ಕೂಡಿದ ಸ್ವರ್ಗೋದ್ಯಾನಗಳಿವೆ.
35ಹಾಗಾದರೆ ನಾವು ಮುಸ್ಲಿಮರನ್ನು ಅಪರಾಧಿಗಳಂತೆ ನಡೆಸಿಕೊಳ್ಳುವೆವೇ?
36ನಿಮಗೇನಾಗಿದೆ? ನೀವು ಹೇಗೆ ತೀರ್ಪು ನೀಡುತ್ತೀರಿ?
37ನಿಮ್ಮಲ್ಲಿ ಒಂದು ಗ್ರಂಥವಿದ್ದು ನೀವು ಅದರಿಂದ ಓದುತ್ತಿದ್ದೀರಾ?
38ಅದರಲ್ಲಿ ನಿಮ್ಮ ಮನಸ್ಸಿಗೆ ಒಪ್ಪಿಗೆಯಾಗುವ ವಿಷಯಗಳಿವೆಯೇ?
39ಅಥವಾ, ನೀವು ಸ್ವಯಂ ನಿಶ್ಚಯಿಸುವುದೆಲ್ಲವೂ ನಿಮಗಿದೆಯೆಂದು ಪುನರುತ್ಥಾನ ದಿನದ ತನಕ ತಲುಪುವ ಯಾವುದಾದರೂ ಪ್ರತಿಜ್ಞೆಗಳನ್ನು ನೀವು ನಮ್ಮಿಂದ ಪಡೆದಿದ್ದೀರಾ?
40ಅವರಲ್ಲಿ ಯಾರು ಇದರ ಹೊಣೆಯನ್ನು ವಹಿಸಿಕೊಳ್ಳುತ್ತಾರೆಂದು ಅವರೊಡನೆ ಕೇಳಿರಿ.
41ಅವರಿಗೆ ಯಾರಾದರೂ ಸಹಭಾಗಿಗಳು ಇದ್ದಾರೆಯೇ? ಅವರು ಸತ್ಯವಂತರಾಗಿದ್ದರೆ ಅವರ ಸಹಭಾಗಿಗಳನ್ನು ಕರೆದುಕೊಂಡು ಬರಲಿ.
42ಕಣಕಾಲನ್ನು ಪ್ರದರ್ಶಿಸಲಾಗುವ ದಿನ. ಆಗ ಅವರನ್ನು ಸಾಷ್ಟಾಂಗ ಮಾಡಲು ಕರೆಯಲಾಗುವುದು. ಆದರೆ ಅವರಿಗೆ (ಸಾಷ್ಟಾಂಗ ಮಾಡಲು) ಸಾಧ್ಯವಾಗುವುದಿಲ್ಲ.[1]
43ಅವರ ಕಣ್ಣುಗಳು ತಗ್ಗಿಕೊಂಡಿರುವುವು ಮತ್ತು ಅವಮಾನವು ಅವರನ್ನು ಆವರಿಸಿಕೊಂಡಿರುವುದು. ವಾಸ್ತವದಲ್ಲಿ ಅವರು ಇಹಲೋಕದಲ್ಲಿ ಸುಸ್ಥಿತಿಯಲ್ಲಿದ್ದಾಗಲೂ ಅವರನ್ನು ಸಾಷ್ಟಾಂಗ ಮಾಡಲು ಕರೆಯಲಾಗುತ್ತಿತ್ತು.
44ಆದ್ದರಿಂದ ನನ್ನನ್ನು ಮತ್ತು ಈ ಮಾತನ್ನು (ಕುರ್‌ಆನನ್ನು) ನಿಷೇಧಿಸುವವನನ್ನು ಬಿಟ್ಟುಬಿಡಿ.[1] ಅವರು ತಿಳಿಯದ ರೀತಿಯಲ್ಲಿ ನಾವು ಅವರನ್ನು ಹಂತ ಹಂತವಾಗಿ ಹಿಡಿಯುವೆವು.
45ನಾನು ಅವರಿಗೆ ಕಾಲಾವಕಾಶ ನೀಡುವೆನು. ನಿಶ್ಚಯವಾಗಿಯೂ ನನ್ನ ತಂತ್ರವು ಬಲಿಷ್ಠವಾಗಿದೆ.
46ನೀವು ಅವರೊಡನೆ ಪ್ರತಿಫಲವನ್ನು ಕೇಳಿ ಅವರು (ಅದನ್ನು ನೀಡಲು ಸಾಧ್ಯವಾಗದೆ) ಸಾಲದ ಹೊರೆಯನ್ನು ಹೊರುತ್ತಿದ್ದಾರೆಯೇ?
47ಅವರ ಬಳಿ ಅದೃಶ್ಯ ಜ್ಞಾನವಿದ್ದು ಅವರು ಅದನ್ನು ಬರೆಯುತ್ತಿದ್ದಾರೆಯೇ?
48ಆದ್ದರಿಂದ, ನಿಮ್ಮ ಪರಿಪಾಲಕನ (ಅಲ್ಲಾಹನ) ತೀರ್ಮಾನಕ್ಕಾಗಿ ತಾಳ್ಮೆಯಿಂದಿರಿ. ನೀವು ಮೀನಿನ ಸಂಗಡಿಗನಂತೆ (ಯೂನುಸರಂತೆ) ಆಗಬೇಡಿ. ತೀವ್ರ ದುಃಖಿತನಾಗಿದ್ದ ಸ್ಥಿತಿಯಲ್ಲಿ ಅವರು ಕರೆದು ಪ್ರಾರ್ಥಿಸಿದ ಸಂದರ್ಭ.
49ಅವರ ಪರಿಪಾಲಕನ (ಅಲ್ಲಾಹನ) ಅನುಗ್ರಹವು ಅವರನ್ನು ತಲುಪದಿರುತ್ತಿದ್ದರೆ, ಅವರನ್ನು ಆಕ್ಷೇಪಿತ ಸ್ಥಿತಿಯಲ್ಲಿ ಬಯಲು ತೀರಕ್ಕೆ ಎಸೆಯಲಾಗುತ್ತಿತ್ತು.
50ಅವರ ಪರಿಪಾಲಕ (ಅಲ್ಲಾಹು) ಅವರನ್ನು ಆರಿಸಿದನು ಮತ್ತು ಅವರನ್ನು ನೀತಿವಂತರಲ್ಲಿ ಸೇರಿಸಿದನು.
51ಸತ್ಯನಿಷೇಧಿಗಳು ಈ ಉಪದೇಶವನ್ನು (ಕುರ್‌ಆನನ್ನು) ಕೇಳಿದಾಗ, ತಮ್ಮ ಕೆಟ್ಟದೃಷ್ಟಿಗಳಿಂದ ನಿಮ್ಮನ್ನು ಇನ್ನೇನು ಜಾರುವಂತೆ ಮಾಡುವುದರಲ್ಲಿದ್ದರು.[1] ಅವರು ಹೇಳುತ್ತಿದ್ದರು: “ನಿಶ್ಚಯವಾಗಿಯೂ ಅವನೊಬ್ಬ ಮಾನಸಿಕ ಅಸ್ವಸ್ಥ.”
52ಇದು (ಕುರ್‌ಆನ್) ಸರ್ವಲೋಕಗಳ ಜನರಿಗೆ ಒಂದು ಉಪದೇಶವಲ್ಲದೆ ಇನ್ನೇನೂ ಅಲ್ಲ.