التغابن
The Mutual Disillusion • 18 ayahs • Medinan
بِسْمِ ٱللَّهِ ٱلرَّحْمَٰنِ ٱلرَّحِيمِ
1ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡುತ್ತಿವೆ. ಸಾರ್ವಭೌಮತ್ವವು ಅವನಿಗೆ ಸೇರಿದ್ದು ಮತ್ತು ಸರ್ವಸ್ತುತಿಯು ಅವನಿಗೆ ಮೀಸಲು. ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
2ಅವನೇ ನಿಮ್ಮನ್ನು ಸೃಷ್ಟಿಸಿದವನು. ನಿಮ್ಮಲ್ಲಿ ಸತ್ಯನಿಷೇಧಿಗಳಿದ್ದಾರೆ ಮತ್ತು ಸತ್ಯವಿಶ್ವಾಸಿಗಳೂ ಇದ್ದಾರೆ. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ.
3ಅವನು ಭೂಮ್ಯಾಕಾಶಗಳನ್ನು ಸತ್ಯದೊಂದಿಗೆ ಸೃಷ್ಟಿಸಿದ್ದಾನೆ. ಅವನು ನಿಮಗೆ ರೂಪವನ್ನು ನೀಡಿದ್ದಾನೆ ಮತ್ತು ನಿಮ್ಮ ರೂಪಗಳನ್ನು ಅತ್ಯುತ್ತಮಗೊಳಿಸಿದ್ದಾನೆ. ಗಮ್ಯಸ್ಥಾನವು ಅವನ ಬಳಿಯಲ್ಲೇ ಆಗಿದೆ.
4ಭೂಮ್ಯಾಕಾಶಗಳಲ್ಲಿರುವುದೆಲ್ಲವನ್ನೂ ಅವನು ತಿಳಿದಿದ್ದಾನೆ. ನೀವು ಮುಚ್ಚಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ಅವನು ತಿಳಿಯುತ್ತಾನೆ. ಅಲ್ಲಾಹು ಎದೆಗಳ ಒಳಗಿರುವುದನ್ನು ತಿಳಿಯುತ್ತಾನೆ.
5ಇದಕ್ಕಿಂತ ಮೊದಲು ಸತ್ಯವನ್ನು ನಿಷೇಧಿಸಿದವರ ಸಮಾಚಾರವು ನಿಮಗೆ ತಲುಪಿಲ್ಲವೇ? ಅವರು ಅವರ ದುಷ್ಕರ್ಮಗಳ ರುಚಿಯನ್ನು ನೋಡಿದರು. ಅವರಿಗೆ (ಪರಲೋಕದಲ್ಲಿ) ಯಾತನಾಮಯ ಶಿಕ್ಷೆಯಿದೆ.
6ಅದೇಕೆಂದರೆ, ಅವರ ಬಳಿಗೆ ಸಂದೇಶವಾಹಕರು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಬರುತ್ತಿದ್ದರು. ಆದರೆ ಅವರು ಕೇಳಿದರು: “ಒಬ್ಬ ಮನುಷ್ಯ ನಮಗೆ ದಾರಿ ತೋರಿಸುವುದೇ?” ಅವರು ನಿಷೇಧಿಸಿದರು ಮತ್ತು ಮುಖ ತಿರುಗಿಸಿ ನಡೆದರು. ಅಲ್ಲಾಹು ಅವರ ಬಗ್ಗೆ ನಿರಪೇಕ್ಷನಾದನು. ಅಲ್ಲಾಹು ನಿರಪೇಕ್ಷನು ಮತ್ತು ಸ್ತುತ್ಯರ್ಹನಾಗಿದ್ದಾನೆ.
7ತಮ್ಮನ್ನು ಪುನಃ ಜೀವ ನೀಡಿ ಎಬ್ಬಿಸಲಾಗುವುದಿಲ್ಲ ಎಂದು ಸತ್ಯನಿಷೇಧಿಗಳು ವಾದಿಸಿದರು. ಹೇಳಿರಿ: “ಹೌದು! ನನ್ನ ಪರಿಪಾಲಕನ ಮೇಲಾಣೆ! ಖಂಡಿತವಾಗಿಯೂ ನಿಮಗೆ ಜೀವ ನೀಡಿ ಎಬ್ಬಿಸಲಾಗುವುದು. ನಂತರ ನೀವು ಮಾಡಿದ ಕರ್ಮಗಳ ಬಗ್ಗೆ ನಿಮಗೆ ಖಂಡಿತ ತಿಳಿಸಲಾಗುವುದು. ಅದು ಅಲ್ಲಾಹನಿಗೆ ಬಹಳ ಸುಲಭವಾಗಿದೆ.”
8ಆದ್ದರಿಂದ ನೀವು ಅಲ್ಲಾಹನಲ್ಲಿ, ಅವನ ಸಂದೇಶವಾಹಕರಲ್ಲಿ ಮತ್ತು ನಾವು ಅವತೀರ್ಣಗೊಳಿಸಿದ ಬೆಳಕಿನಲ್ಲಿ (ಕುರ್‌ಆನಿನಲ್ಲಿ) ವಿಶ್ವಾಸವಿಡಿ. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ.
9ಒಟ್ಟುಗೂಡಿಸುವ ಆ ದಿನಕ್ಕಾಗಿ (ಪುನರುತ್ಥಾನ ದಿನಕ್ಕಾಗಿ) ಅವನು ನಿಮ್ಮೆಲ್ಲರನ್ನು ಒಟ್ಟುಗೂಡಿಸುವ ದಿನ! ಅದು ಸೋಲು-ಗೆಲುವಿನ ದಿನವಾಗಿದೆ. ಯಾರು ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾನೋ ಮತ್ತು ಸತ್ಕರ್ಮವೆಸಗುತ್ತಾನೋ ಅವನ ಪಾಪಗಳನ್ನು ಅಲ್ಲಾಹು ಅಳಿಸುತ್ತಾನೆ ಮತ್ತು ಅವನನ್ನು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಪ್ರವೇಶ ಮಾಡಿಸುತ್ತಾನೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. ಅದೇ ಮಹಾ ವಿಜಯ.
10ಸತ್ಯವನ್ನು ನಿಷೇಧಿಸಿದವರು ಮತ್ತು ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ.
11ಯಾವುದೇ ವಿಪತ್ತು ಅಲ್ಲಾಹನ ಅಪ್ಪಣೆಯಿಂದಲ್ಲದೆ ಸಂಭವಿಸುವುದಿಲ್ಲ. ಯಾರು ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾನೋ ಅವನ ಹೃದಯವನ್ನು ಅಲ್ಲಾಹು ಸನ್ಮಾರ್ಗದಲ್ಲಿ ಮುನ್ನಡೆಸುತ್ತಾನೆ. ಅಲ್ಲಾಹು ಎಲ್ಲಾ ವಿಷಯಗಳ ಬಗ್ಗೆ ತಿಳಿದವನಾಗಿದ್ದಾನೆ.
12ನೀವು ಅಲ್ಲಾಹು ಅವನ ಮತ್ತು ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ. ನೀವೇನಾದರೂ ವಿಮುಖರಾಗುವುದಾದರೆ, ನಮ್ಮ ಸಂದೇಶವಾಹಕರ ಕರ್ತವ್ಯವು ಸಂದೇಶವನ್ನು ಸ್ಪಷ್ಟವಾಗಿ ತಲುಪಿಸುವುದು ಮಾತ್ರವಾಗಿದೆ.
13ಅಲ್ಲಾಹು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ.
14ಓ ಸತ್ಯವಿಶ್ವಾಸಿಗಳೇ! ನಿಶ್ಚಯವಾಗಿಯೂ ನಿಮ್ಮ ಪತ್ನಿಯರಲ್ಲಿ ಮತ್ತು ನಿಮ್ಮ ಮಕ್ಕಳಲ್ಲಿ ನಿಮಗೆ ವೈರಿಗಳಿದ್ದಾರೆ. ಆದ್ದರಿಂದ ಅವರ ಬಗ್ಗೆ ಜಾಗರೂಕರಾಗಿರಿ. ನೀವು ಮನ್ನಿಸುವುದಾದರೆ, (ಅವರ ತಪ್ಪುಗಳನ್ನು) ನಿರ್ಲಕ್ಷಿಸುವುದಾದರೆ ಮತ್ತು ಅವರಿಗೆ ಕ್ಷಮಿಸುವುದಾದರೆ ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.[1]
15ನಿಮ್ಮ ಆಸ್ತಿ ಮತ್ತು ಮಕ್ಕಳು ಒಂದು ಪರೀಕ್ಷೆಯಾಗಿದೆ. ಅಲ್ಲಾಹನ ಬಳಿ ಮಹಾ ಪ್ರತಿಫಲವಿದೆ.
16ಆದ್ದರಿಂದ ನಿಮಗೆ ಸಾಧ್ಯವಾಗುವಷ್ಟರ ಮಟ್ಟಿಗೆ ನೀವು ಅಲ್ಲಾಹನನ್ನು ಭಯಪಡಿರಿ. ಕಿವಿಗೊಟ್ಟು ಕೇಳಿರಿ ಮತ್ತು ಅನುಸರಿಸಿರಿ. ನಿಮಗೆ ಒಳಿತಾಗಿರುವ ವಿಧದಲ್ಲಿ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರಿ. ಯಾರನ್ನು ಅವರ ಮನಸ್ಸಿನ ಆಸೆಬುರುಕತನದಿಂದ ಕಾಪಾಡಲಾಗಿದೆಯೋ ಅವರು ಯಶಸ್ವಿಯಾದವರು.
17ನೀವು ಅಲ್ಲಾಹನಿಗೆ ಉತ್ತಮ ಸಾಲವನ್ನು ನೀಡುವುದಾದರೆ ಅವನು ಅದನ್ನು ನಿಮಗೆ ಹಲವು ಪಟ್ಟು ದ್ವಿಗುಣಗೊಳಿಸುವನು ಮತ್ತು ನಿಮ್ಮನ್ನು ಕ್ಷಮಿಸುವನು. ಅಲ್ಲಾಹು ಕೃತಜ್ಞನು ಮತ್ತು ಸಹಿಷ್ಣುತೆಯುಳ್ಳವನಾಗಿದ್ದಾನೆ.
18ಅವನು ದೃಶ್ಯ-ಅದೃಶ್ಯಗಳನ್ನು ತಿಳಿದವನಾಗಿದ್ದಾನೆ ಮತ್ತು ಪ್ರಬಲನು ಹಾಗೂ ವಿವೇಕಪೂರ್ಣನಾಗಿದ್ದಾನೆ.