القيامة
The Resurrection • 40 ayahs • Meccan
بِسْمِ ٱللَّهِ ٱلرَّحْمَٰنِ ٱلرَّحِيمِ
1ನಾನು ಪುನರುತ್ಥಾನದ ದಿನದ ಮೇಲೆ ಆಣೆ ಮಾಡುತ್ತೇನೆ.
2ನಾನು ಆಕ್ಷೇಪಿಸುವ ಮನಸ್ಸಿನ ಮೇಲೆ ಆಣೆ ಮಾಡುತ್ತೇನೆ.
3ಮನುಷ್ಯನು ಭಾವಿಸುತ್ತಿದ್ದಾನೆಯೇ ನಾವು ಅವನ ಮೂಳೆಗಳನ್ನು ಜೋಡಿಸಲಾರೆವು ಎಂದು?
4ಹೌದು! ನಮಗೆ ಅವನ ಬೆರಳ ತುದಿಗಳನ್ನು ಕೂಡ ಸರಿಪಡಿಸುವ ಸಾಮರ್ಥ್ಯವಿದೆ.
5ಆದರೆ ಮನುಷ್ಯನು ಮುಂದೆಯೂ ಕೂಡ ಅವಿಧೇಯನಾಗಿಯೇ ಇರಲು ಬಯಸುತ್ತಾನೆ.
6ಅವನು ಕೇಳುತ್ತಾನೆ: “ಪುನರುತ್ಥಾನ ದಿನ ಯಾವಾಗ ಸಂಭವಿಸುತ್ತದೆ?”
7ದೃಷ್ಟಿಯು ಕೋರೈಸುವಾಗ.
8ಚಂದ್ರ ಪ್ರಕಾಶ ರಹಿತವಾಗುವಾಗ.
9ಸೂರ್ಯ-ಚಂದ್ರರನ್ನು ಜೋಡಿಸಲಾಗುವಾಗ.[1]
10ಅಂದು ಮನುಷ್ಯನು ಕೇಳುವನು: “ಪಲಾಯನ ಮಾಡಲು ಸ್ಥಳವೆಲ್ಲಿದೆ?”
11ಇಲ್ಲ, ಯಾವುದೇ ರಕ್ಷಣೆಯೂ ಇಲ್ಲ.
12ಅಂದು ನಿನ್ನ ವಾಸ್ತವ್ಯವು ನಿನ್ನ ಪರಿಪಾಲಕನ (ಅಲ್ಲಾಹನ) ಕಡೆಗೇ ಆಗಿದೆ.
13ಅಂದು ಮನುಷ್ಯನಿಗೆ ಅವನು ಮುಂದಕ್ಕೆ ಕಳುಹಿಸಿರುವ ಮತ್ತು ಹಿಂದೆ ಬಿಟ್ಟಿರುವ ಕರ್ಮಗಳ ಬಗ್ಗೆ ತಿಳಿಸಲಾಗುವುದು.
14ಅಲ್ಲ, ವಾಸ್ತವವಾಗಿ ಮನುಷ್ಯನು ಅವನ ವಿರುದ್ಧವೇ ಸಾಕ್ಷಿಯಾಗಿದ್ದಾನೆ.
15ಅವನು ಎಷ್ಟೇ ನೆಪಗಳನ್ನು ಒಡ್ಡಿದರೂ ಸಹ.
16(ಪ್ರವಾದಿಯವರೇ) ನೀವು ಕುರ್‌ಆನನ್ನು ಆತುರದಿಂದ ಕಂಠಪಾಠ ಮಾಡಲು ನಿಮ್ಮ ನಾಲಗೆಯನ್ನು ಅಲುಗಾಡಿಸಬೇಡಿ.
17ನಿಶ್ಚಯವಾಗಿಯೂ ಅದನ್ನು ಕ್ರೋಢೀಕರಿಸುವುದು ಮತ್ತು ನೀವು ಅದನ್ನು ಪಠಿಸುವಂತೆ ಮಾಡುವುದು ನಮ್ಮ ಹೊಣೆಯಾಗಿದೆ.[1]
18ನಾವು ಅದನ್ನು ಪಠಿಸಿದರೆ ನೀವು ಆ ಪಠಣವನ್ನು ಹಿಂಬಾಲಿಸಿರಿ.
19ನಂತರ ಅದನ್ನು ವಿವರಿಸಿಕೊಡುವುದು ನಮ್ಮ ಹೊಣೆಯಾಗಿದೆ.
20ಇಲ್ಲ, ನೀವು ಇಹಲೋಕವನ್ನು ಪ್ರೀತಿಸುತ್ತೀರಿ.
21ಪರಲೋಕವನ್ನು ತೊರೆಯುತ್ತೀರಿ.
22ಅಂದು ಬಹಳಷ್ಟು ಮುಖಗಳು ಪ್ರಸನ್ನವಾಗಿರುವುವು.
23ಅದರ ಪರಿಪಾಲಕನ (ಅಲ್ಲಾಹನ) ಕಡೆಗೆ ನೋಡುತ್ತಿರುವುವು.
24ಅಂದು ಬಹಳಷ್ಟು ಮುಖಗಳು ವಿಷಣ್ಣವಾಗಿರುವುವು.
25ಅವರೊಡನೆ ಬೆನ್ನು ತುಂಡಾಗಿಸುವ ರೀತಿಯಲ್ಲಿ ವ್ಯವಹರಿಸಲಾಗುವುದೆಂದು ಅವರು ಭಾವಿಸುವರು.
26ಇಲ್ಲ, ಆತ್ಮವು ಕೊರಳ ಮೂಳೆಗೆ ತಲುಪಿದಾಗ.
27“ಮಂತ್ರಿಸುವವರು ಯಾರಾದರೂ ಇದ್ದಾರೆಯೇ?” ಎಂದು ಕೇಳಲಾಗುವಾಗ.
28ಅದು ಅಗಲಿಕೆಯ ಸಮಯವೆಂದು ಅವನಿಗೆ ಖಾತ್ರಿಯಾದಾಗ.
29ಕಣಕಾಲು ಕಣಕಾಲಿನೊಂದಿಗೆ ಸುತ್ತುವಾಗ.
30ಅಂದು (ಅವನನ್ನು) ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಸಾಗಿಸಲಾಗುವುದು.
31ಅವನು ವಿಶ್ವಾಸವಿಡಲಿಲ್ಲ, ನಮಾಝ್ ಕೂಡ ಮಾಡಲಿಲ್ಲ.
32ಆದರೆ ಅವನು ನಿಷೇಧಿಸಿದನು ಮತ್ತು ಮುಖ ತಿರುಗಿಸಿ ನಡೆದನು.
33ನಂತರ ಎದೆಯುಬ್ಬಿಸಿ ತನ್ನ ಮನೆಯವರ ಕಡೆಗೆ ಹೊರಟನು.
34ನಿನಗೆ ವಿನಾಶ ಕಾದಿದೆ. ನಿನಗೆ ವಿನಾಶ ಕಾದಿದೆ.
35ಪುನಃ ನಿನಗೆ ವಿನಾಶ ಕಾದಿದೆ. ನಿನಗೆ ವಿನಾಶ ಕಾದಿದೆ.
36ಮನುಷ್ಯನು ಭಾವಿಸುತ್ತಾನೆಯೇ ಅವನನ್ನು ಸುಮ್ಮನೆ ಬಿಟ್ಟುಬಿಡಲಾಗುವುದೆಂದು?
37ಅವನು ಸ್ರವಿಸಲಾದ ವೀರ್ಯದ ಒಂದು ಬಿಂದುವಾಗಿರಲಿಲ್ಲವೇ?
38ನಂತರ ಅವನು ರಕ್ತಪಿಂಡವಾದನು. ನಂತರ ಅಲ್ಲಾಹು ಅವನನ್ನು ಸೃಷ್ಟಿಸಿದನು ಮತ್ತು ಸರಿಪಡಿಸಿದನು.
39ನಂತರ ಅವನಿಂದ ಗಂಡು ಮತ್ತು ಹೆಣ್ಣು ಎಂಬ ಜೋಡಿಯನ್ನು ಮಾಡಿದನು.
40ಅಂತಹವನು ಸತ್ತವರಿಗೆ ಜೀವ ನೀಡುವ ಸಾಮರ್ಥ್ಯವನ್ನು ಹೊಂದಿಲ್ಲವೇ?