Ash-Shu'ara

الشعراء

The Poets227 ayahsMeccan

بِسْمِ ٱللَّهِ ٱلرَّحْمَٰنِ ٱلرَّحِيمِ

طسٓمٓ﴿١

1ತ್ವಾ ಸೀನ್ ಮೀಮ್.

تِلۡكَ ءَايَٰتُ ٱلۡكِتَٰبِ ٱلۡمُبِينِ﴿٢

2ಇವು ಸ್ಪಷ್ಟ ಗ್ರಂಥದ ವಚನಗಳಾಗಿವೆ.

لَعَلَّكَ بَٰخِعٞ نَّفۡسَكَ أَلَّا يَكُونُواْ مُؤۡمِنِينَ﴿٣

3ಅವರು ಸತ್ಯವಿಶ್ವಾಸಿಗಳಾಗದ ಕಾರಣ ಬಹುಶಃ ನೀವು ನಿಮ್ಮ ಪ್ರಾಣವನ್ನೇ ಕಳಕೊಳ್ಳುತ್ತಿದ್ದೀರಿ.

إِن نَّشَأۡ نُنَزِّلۡ عَلَيۡهِم مِّنَ ٱلسَّمَآءِ ءَايَةٗ فَظَلَّتۡ أَعۡنَٰقُهُمۡ لَهَا خَٰضِعِينَ﴿٤

4ನಾವು ಇಚ್ಛಿಸಿದರೆ ಅವರಿಗೆ ಆಕಾಶದಿಂದ ಒಂದು ದೃಷ್ಟಾಂತವನ್ನು ಇಳಿಸಿಕೊಡುವೆವು. ಅದರ ಮುಂದೆ ಅವರ ಕೊರಳುಗಳು ವಿನಮ್ರವಾಗುವುವು.

وَمَا يَأۡتِيهِم مِّن ذِكۡرٖ مِّنَ ٱلرَّحۡمَٰنِ مُحۡدَثٍ إِلَّا كَانُواْ عَنۡهُ مُعۡرِضِينَ﴿٥

5ಅವರ ಬಳಿಗೆ ಪರಮ ದಯಾಮಯನ (ಅಲ್ಲಾಹನ) ಕಡೆಯಿಂದ ಯಾವುದೇ ಹೊಸ ಉಪದೇಶವು ಬಂದಾಗಲೂ ಅವರು ಅದರಿಂದ ವಿಮುಖರಾಗುತ್ತಲೇ ಇದ್ದರು.

فَقَدۡ كَذَّبُواْ فَسَيَأۡتِيهِمۡ أَنۢبَٰٓؤُاْ مَا كَانُواْ بِهِۦ يَسۡتَهۡزِءُونَ﴿٦

6ಅವರು ನಿಷೇಧಿಸಿದರು. ಆದ್ದರಿಂದ ಅವರು ಏನನ್ನು ತಮಾಷೆ ಮಾಡುತ್ತಿದ್ದರೋ ಅದರ ಸಮಾಚಾರವು ಸದ್ಯವೇ ಅವರ ಬಳಿಗೆ ಬರುವುದು.

أَوَلَمۡ يَرَوۡاْ إِلَى ٱلۡأَرۡضِ كَمۡ أَنۢبَتۡنَا فِيهَا مِن كُلِّ زَوۡجٖ كَرِيمٍ﴿٧

7ಅವರು ಭೂಮಿಯನ್ನು ನೋಡುವುದಿಲ್ಲವೇ? ನಾವು ಅದರಲ್ಲಿ ಎಲ್ಲಾ ವಿಧಗಳ ಉತ್ತಮ ಸಸ್ಯವರ್ಗಗಳಿಂದ ಎಷ್ಟೆಲ್ಲಾ ಬೆಳೆಸಿದ್ದೇವೆಂದು.

إِنَّ فِي ذَٰلِكَ لَأٓيَةٗۖ وَمَا كَانَ أَكۡثَرُهُم مُّؤۡمِنِينَ﴿٨

8ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.

وَإِنَّ رَبَّكَ لَهُوَ ٱلۡعَزِيزُ ٱلرَّحِيمُ﴿٩

9ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

وَإِذۡ نَادَىٰ رَبُّكَ مُوسَىٰٓ أَنِ ٱئۡتِ ٱلۡقَوۡمَ ٱلظَّٰلِمِينَ﴿١٠

10ನಿಮ್ಮ ಪರಿಪಾಲಕನು (ಅಲ್ಲಾಹು) ಮೂಸಾರನ್ನು ಕರೆದು ಹೇಳಿದ ಸಂದರ್ಭ: “ಅತಿರೇಕಿಗಳಾದ ಆ ಜನರ ಬಳಿಗೆ ಹೋಗಿರಿ.

قَوۡمَ فِرۡعَوۡنَۚ أَلَا يَتَّقُونَ﴿١١

11ಫರೋಹ‍ನ ಜನರ ಬಳಿಗೆ.” ಅವರು ಅಲ್ಲಾಹನನ್ನು ಭಯಪಡುವುದಿಲ್ಲವೇ?

قَالَ رَبِّ إِنِّيٓ أَخَافُ أَن يُكَذِّبُونِ﴿١٢

12ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ಅವರು ನನ್ನನ್ನು ನಿಷೇಧಿಸುವರೆಂದು ನನಗೆ ಭಯವಾಗುತ್ತಿದೆ.

وَيَضِيقُ صَدۡرِي وَلَا يَنطَلِقُ لِسَانِي فَأَرۡسِلۡ إِلَىٰ هَٰرُونَ﴿١٣

13ನನಗೆ ಹೃದಯದಲ್ಲಿ ಇಕ್ಕಟ್ಟು ಅನುಭವವಾಗುತ್ತದೆ ಮತ್ತು ನನ್ನ ನಾಲಗೆ ಸರಿಯಾಗಿ ಚಲಿಸುವುದಿಲ್ಲ. ಆದ್ದರಿಂದ ನೀನು ಹಾರೂನರಿಗೂ ಸಂದೇಶ ಕಳುಹಿಸು.

وَلَهُمۡ عَلَيَّ ذَنۢبٞ فَأَخَافُ أَن يَقۡتُلُونِ﴿١٤

14ಅವರಿಗೆ ನನ್ನ ಮೇಲೆ ಒಂದು ಅಪರಾಧ ಮಾಡಿದ ಆರೋಪವೂ ಇದೆ. ಆದ್ದರಿಂದ ಅವರು ನನ್ನನ್ನು ಕೊಲ್ಲುವರೆಂದು ನನಗೆ ಭಯವಾಗುತ್ತಿದೆ.”

قَالَ كَلَّاۖ فَٱذۡهَبَا بِـَٔايَٰتِنَآۖ إِنَّا مَعَكُم مُّسۡتَمِعُونَ﴿١٥

15ಅಲ್ಲಾಹು ಹೇಳಿದನು: “ಸಾಧ್ಯವೇ ಇಲ್ಲ. ನೀವಿಬ್ಬರೂ ನಮ್ಮ ದೃಷ್ಟಾಂತಗಳೊಂದಿಗೆ ಹೋಗಿರಿ. ನಿಶ್ಚಯವಾಗಿಯೂ ನಾವು ಎಲ್ಲವನ್ನೂ ಕೇಳುತ್ತಾ ನಿಮ್ಮ ಜೊತೆಗಿದ್ದೇವೆ.”

فَأۡتِيَا فِرۡعَوۡنَ فَقُولَآ إِنَّا رَسُولُ رَبِّ ٱلۡعَٰلَمِينَ﴿١٦

16ನೀವು ಫರೋಹ‍ನ ಬಳಿಗೆ ಹೋಗಿರಿ. ನಂತರ ಹೇಳಿರಿ: “ನಾವು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕರಾಗಿದ್ದೇವೆ.

أَنۡ أَرۡسِلۡ مَعَنَا بَنِيٓ إِسۡرَٰٓءِيلَ﴿١٧

17ಇಸ್ರಾಯೇಲ್ ಮಕ್ಕಳನ್ನು ನಮ್ಮ ಜೊತೆಗೆ ಕಳುಹಿಸಿಕೊಡಬೇಕು (ಎಂಬ ಆದೇಶದೊಂದಿಗೆ ಬಂದಿದ್ದೇವೆ).”

قَالَ أَلَمۡ نُرَبِّكَ فِينَا وَلِيدٗا وَلَبِثۡتَ فِينَا مِنۡ عُمُرِكَ سِنِينَ﴿١٨

18ಫರೋಹ ಹೇಳಿದನು: “ನೀನು ಮಗುವಾಗಿದ್ದಾಗ ನಾವು ನಿನ್ನನ್ನು ಸಾಕಲಿಲ್ಲವೇ? ನೀನಂತೂ ನಿನ್ನ ಆಯುಷ್ಯದಲ್ಲಿ ಅನೇಕ ವರ್ಷಗಳನ್ನು ನಮ್ಮ ಜೊತೆಗೇ ಕಳೆದಿರುವೆ.

وَفَعَلۡتَ فَعۡلَتَكَ ٱلَّتِي فَعَلۡتَ وَأَنتَ مِنَ ٱلۡكَٰفِرِينَ﴿١٩

19ನಂತರ ನೀನು ನಿನ್ನ ಆ ಕೆಟ್ಟ ಕೃತ್ಯವನ್ನು ಮಾಡಿದೆ. ನಿಜಕ್ಕೂ ನೀನು ಕೃತಜ್ಞತೆಯಿಲ್ಲದವನಾಗಿದ್ದೆ.”

قَالَ فَعَلۡتُهَآ إِذٗا وَأَنَا۠ مِنَ ٱلضَّآلِّينَ﴿٢٠

20ಮೂಸಾ ಹೇಳಿದರು: “ನಾನು ಆ ಕೃತ್ಯವನ್ನು ಮಾಡಿದ್ದು ನಿಜ. ಆದರೆ ಆಗ ನಾನು ಸರಿದಾರಿಯನ್ನು ತಿಳಿಯದ ಜನರಲ್ಲಿ ಸೇರಿದ್ದೆನು.

فَفَرَرۡتُ مِنكُمۡ لَمَّا خِفۡتُكُمۡ فَوَهَبَ لِي رَبِّي حُكۡمٗا وَجَعَلَنِي مِنَ ٱلۡمُرۡسَلِينَ﴿٢١

21ನಂತರ ನಿಮ್ಮ ಭಯದಿಂದ ನಾನು ನಿಮ್ಮಿಂದ ದೂರ ಓಡಿದೆನು. ನಂತರ ನನ್ನ ಪರಿಪಾಲಕನು (ಅಲ್ಲಾಹು) ನನಗೆ ವಿವೇಕವನ್ನು ದಯಪಾಲಿಸಿದನು ಮತ್ತು ನನ್ನನ್ನು ಸಂದೇಶವಾಹಕರಲ್ಲಿ ಸೇರಿಸಿದನು.

وَتِلۡكَ نِعۡمَةٞ تَمُنُّهَا عَلَيَّ أَنۡ عَبَّدتَّ بَنِيٓ إِسۡرَٰٓءِيلَ﴿٢٢

22ನೀನು ನನ್ನನ್ನು ಸಾಕಿ ಸಲಹಿದ್ದನ್ನು ನೀನು ನನಗೆ ಮಾಡಿದ ಉಪಕಾರವೆಂದು ಹೇಳುತ್ತಿರುವೆಯಾ? ಆದರೆ ವಾಸ್ತವವಾಗಿ, ನೀನು ಇಸ್ರಾಯೇಲ್ ಮಕ್ಕಳನ್ನು ನಿನ್ನ ಗುಲಾಮರನ್ನಾಗಿ ಮಾಡಿಕೊಂಡಿರುವೆ.”

قَالَ فِرۡعَوۡنُ وَمَا رَبُّ ٱلۡعَٰلَمِينَ﴿٢٣

23ಫರೋಹ ಕೇಳಿದನು: “ಸರ್ವಲೋಕಗಳ ಪರಿಪಾಲಕ ಎಂದರೇನು?”

قَالَ رَبُّ ٱلسَّمَٰوَٰتِ وَٱلۡأَرۡضِ وَمَا بَيۡنَهُمَآۖ إِن كُنتُم مُّوقِنِينَ﴿٢٤

24ಮೂಸಾ ಹೇಳಿದರು: “ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ನೀವು ದೃಢವಿಶ್ವಾಸವುಳ್ಳವರಾಗಿದ್ದರೆ.”

قَالَ لِمَنۡ حَوۡلَهُۥٓ أَلَا تَسۡتَمِعُونَ﴿٢٥

25ಫರೋಹ ತನ್ನ ಸುತ್ತಮುತ್ತಲಿರುವ ಜನರೊಡನೆ ಕೇಳಿದನು: “ಏನು? ನೀವು ಕಿವಿಗೊಡುವುದಿಲ್ಲವೇ?”

قَالَ رَبُّكُمۡ وَرَبُّ ءَابَآئِكُمُ ٱلۡأَوَّلِينَ﴿٢٦

26ಮೂಸಾ ಹೇಳಿದರು: “ಅವನೇ ನಿಮ್ಮ ಮತ್ತು ನಿಮ್ಮ ಪೂರ್ವಜರ ಪರಿಪಾಲಕ.”

قَالَ إِنَّ رَسُولَكُمُ ٱلَّذِيٓ أُرۡسِلَ إِلَيۡكُمۡ لَمَجۡنُونٞ﴿٢٧

27ಫರೋಹ ಹೇಳಿದನು: “ನಿಮ್ಮ ಬಳಿಗೆ ಕಳುಹಿಸಲಾಗಿರುವ ಈ ನಿಮ್ಮ ಸಂದೇಶವಾಹಕ ನಿಜಕ್ಕೂ ಒಬ್ಬ ಮಾನಸಿಕ ಅಸ್ವಸ್ಥ.”

قَالَ رَبُّ ٱلۡمَشۡرِقِ وَٱلۡمَغۡرِبِ وَمَا بَيۡنَهُمَآۖ إِن كُنتُمۡ تَعۡقِلُونَ﴿٢٨

28ಮೂಸಾ ಹೇಳಿದರು: “ಅವನೇ ಪೂರ್ವ, ಪಶ್ಚಿಮ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ನೀವು ಆಲೋಚಿಸುವವರಾಗಿದ್ದರೆ.”

قَالَ لَئِنِ ٱتَّخَذۡتَ إِلَٰهًا غَيۡرِي لَأَجۡعَلَنَّكَ مِنَ ٱلۡمَسۡجُونِينَ﴿٢٩

29ಫರೋಹ ಹೇಳಿದನು: “ನೀನು ನನ್ನನ್ನು ಬಿಟ್ಟು ಬೇರೊಬ್ಬನನ್ನು ದೇವರೆಂದು ಸ್ವೀಕರಿಸಿದರೆ ನಾನು ನಿನ್ನನ್ನು ಖಂಡಿತ ಸೆರೆಮನೆಗೆ ತಳ್ಳುವೆನು.”

قَالَ أَوَلَوۡ جِئۡتُكَ بِشَيۡءٖ مُّبِينٖ﴿٣٠

30ಮೂಸಾ ಹೇಳಿದರು: “ಒಂದು ವೇಳೆ ನಾನು ನಿಮ್ಮ ಬಳಿಗೆ ಒಂದು ಸ್ಪಷ್ಟ ಸಾಕ್ಷ್ಯವನ್ನು ತಂದು ತೋರಿಸಿದರೆ (ನೀವು ನನ್ನ ಮಾತನ್ನು ನಂಬುವಿರಾ)?”

قَالَ فَأۡتِ بِهِۦٓ إِن كُنتَ مِنَ ٱلصَّٰدِقِينَ﴿٣١

31ಫರೋಹ ಹೇಳಿದನು: “ಸರಿ! ತಂದು ತೋರಿಸು. ನೀನು ಸತ್ಯವಂತನಾಗಿದ್ದರೆ.”

فَأَلۡقَىٰ عَصَاهُ فَإِذَا هِيَ ثُعۡبَانٞ مُّبِينٞ﴿٣٢

32ಆಗ ಮೂಸಾ ತಮ್ಮ ಕೋಲನ್ನು ಎಸೆದರು. ಅದು ತಕ್ಷಣ ಒಂದು ಸರ್ಪವಾಗಿ ಮಾರ್ಪಟ್ಟಿತು.

وَنَزَعَ يَدَهُۥ فَإِذَا هِيَ بَيۡضَآءُ لِلنَّٰظِرِينَ﴿٣٣

33ಅವರು ತಮ್ಮ ಕೈಯನ್ನು (ಪಾರ್ಶ್ವದಿಂದ) ಎಳೆದರು. ಆಗ ಅದು ನೋಡುಗರಿಗೆ ಬೆಳ್ಳಗೆ ಹೊಳೆಯುವಂತೆ ಕಂಡಿತು.

قَالَ لِلۡمَلَإِ حَوۡلَهُۥٓ إِنَّ هَٰذَا لَسَٰحِرٌ عَلِيمٞ﴿٣٤

34ಫರೋಹ ತನ್ನ ಸುತ್ತಮುತ್ತಲಿದ್ದ ಮುಖಂಡರೊಂದಿಗೆ ಹೇಳಿದನು: “ನಿಜಕ್ಕೂ ಇವನೊಬ್ಬ ಅಗಾಧ ಜ್ಞಾನವಿರುವ ಮಾಟಗಾರನಾಗಿದ್ದಾನೆ.

يُرِيدُ أَن يُخۡرِجَكُم مِّنۡ أَرۡضِكُم بِسِحۡرِهِۦ فَمَاذَا تَأۡمُرُونَ﴿٣٥

35ತನ್ನ ಮಾಟಗಾರಿಕೆಯಿಂದ ನಿಮ್ಮನ್ನು ನಿಮ್ಮ ಊರಿನಿಂದ ಓಡಿಸುವುದು ಇವನ ಉದ್ದೇಶವಾಗಿದೆ. ಹೇಳಿ, ನೀವೇನು ಆದೇಶಿಸುತ್ತೀರಿ?”

قَالُوٓاْ أَرۡجِهۡ وَأَخَاهُ وَٱبۡعَثۡ فِي ٱلۡمَدَآئِنِ حَٰشِرِينَ﴿٣٦

36ಮುಖಂಡರು ಹೇಳಿದರು: “ಇವನ ಮತ್ತು ಇವನ ಸಹೋದರನ ವಿಷಯವನ್ನು (ಸ್ವಲ್ಪ ಕಾಲ) ಮುಂದೂಡಿರಿ ಮತ್ತು (ಮಾಟಗಾರರನ್ನು) ಒಟ್ಟು ಸೇರಿಸಲು ನಗರಗಳಿಗೆ ಆಳುಗಳನ್ನು ಕಳುಹಿಸಿರಿ.

يَأۡتُوكَ بِكُلِّ سَحَّارٍ عَلِيمٖ﴿٣٧

37ಅವರು ಅಗಾಧ ಜ್ಞಾನವಿರುವ ಎಲ್ಲಾ ಮಾಟಗಾರರನ್ನು ಕರೆದುಕೊಂಡು ಬರಲಿ.”

فَجُمِعَ ٱلسَّحَرَةُ لِمِيقَٰتِ يَوۡمٖ مَّعۡلُومٖ﴿٣٨

38ನಂತರ ಒಂದು ಸುಪರಿಚಿತ ದಿನದ ನಿಶ್ಚಿತ ಸಮಯದಲ್ಲಿ ಮಾಟಗಾರರನ್ನು ಒಟ್ಟು ಸೇರಿಸಲಾಯಿತು.

وَقِيلَ لِلنَّاسِ هَلۡ أَنتُم مُّجۡتَمِعُونَ﴿٣٩

39ಪ್ರಜೆಗಳೊಡನೆ ಕೇಳಲಾಯಿತು: “ನೀವು ಕೂಡ ಒಟ್ಟುಗೂಡುತ್ತೀರಲ್ಲವೇ?

لَعَلَّنَا نَتَّبِعُ ٱلسَّحَرَةَ إِن كَانُواْ هُمُ ٱلۡغَٰلِبِينَ﴿٤٠

40ಮಾಟಗಾರರು ಗೆದ್ದರೆ ನಮಗೆ ಅವರನ್ನೇ ಹಿಂಬಾಲಿಸಬಹುದು.”

فَلَمَّا جَآءَ ٱلسَّحَرَةُ قَالُواْ لِفِرۡعَوۡنَ أَئِنَّ لَنَا لَأَجۡرًا إِن كُنَّا نَحۡنُ ٱلۡغَٰلِبِينَ﴿٤١

41ನಂತರ ಮಾಟಗಾರರು ಬಂದಾಗ, ಅವರು ಫರೋಹ‍ನೊಡನೆ ಕೇಳಿದರು: “ನಾವು ಗೆದ್ದರೆ ನಮಗೆ ಖಂಡಿತ ಪ್ರತಿಫಲವಿದೆಯಲ್ಲವೇ?”

قَالَ نَعَمۡ وَإِنَّكُمۡ إِذٗا لَّمِنَ ٱلۡمُقَرَّبِينَ﴿٤٢

42ಫರೋಹ ಹೇಳಿದನು: “ಹೌದು! ನೀವು ಖಂಡಿತ ನನ್ನ ಆಪ್ತರಾಗಿ ಬಿಡುವಿರಿ.”

قَالَ لَهُم مُّوسَىٰٓ أَلۡقُواْ مَآ أَنتُم مُّلۡقُونَ﴿٤٣

43ಮೂಸಾ ಅವರೊಡನೆ ಹೇಳಿದರು: “ನಿಮಗೆ ಎಸೆಯಲಿರುವುದನ್ನು ಎಸೆಯಿರಿ.”

فَأَلۡقَوۡاْ حِبَالَهُمۡ وَعِصِيَّهُمۡ وَقَالُواْ بِعِزَّةِ فِرۡعَوۡنَ إِنَّا لَنَحۡنُ ٱلۡغَٰلِبُونَ﴿٤٤

44ಆಗ ಅವರು ಅವರ ಹಗ್ಗಗಳನ್ನು ಮತ್ತು ಕೋಲುಗಳನ್ನು ಎಸೆದರು. ಅವರು ಹೇಳಿದರು: “ಫರೋಹ‍ನ ಪ್ರತಿಷ್ಠೆಯ ಮೇಲಾಣೆ! ನಿಶ್ಚಯವಾಗಿಯೂ ನಾವೇ ಗೆಲ್ಲುವೆವು.”

فَأَلۡقَىٰ مُوسَىٰ عَصَاهُ فَإِذَا هِيَ تَلۡقَفُ مَا يَأۡفِكُونَ﴿٤٥

45ಆಗ ಮೂಸಾ ತಮ್ಮ ಕೋಲನ್ನು ಎಸೆದರು. ಆಗ ಅಗೋ! ಅವರು ಕಣ್ಕಟ್ಟಾಗಿ ನಿರ್ಮಿಸಿರುವುದೆಲ್ಲವನ್ನೂ ಅದು ನುಂಗತೊಡಗಿತು.

فَأُلۡقِيَ ٱلسَّحَرَةُ سَٰجِدِينَ﴿٤٦

46ಆಗ ಮಾಟಗಾರರು ಸಾಷ್ಟಾಂಗ ಬಿದ್ದರು.

قَالُوٓاْ ءَامَنَّا بِرَبِّ ٱلۡعَٰلَمِينَ﴿٤٧

47ಅವರು ಹೇಳಿದರು: “ನಾವು ಸರ್ವಲೋಕಗಳ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಟ್ಟಿದ್ದೇವೆ.

رَبِّ مُوسَىٰ وَهَٰرُونَ﴿٤٨

48ಮೂಸಾ ಮತ್ತು ಹಾರೂನರ ಪರಿಪಾಲಕನಲ್ಲಿ.”

قَالَ ءَامَنتُمۡ لَهُۥ قَبۡلَ أَنۡ ءَاذَنَ لَكُمۡۖ إِنَّهُۥ لَكَبِيرُكُمُ ٱلَّذِي عَلَّمَكُمُ ٱلسِّحۡرَ فَلَسَوۡفَ تَعۡلَمُونَۚ لَأُقَطِّعَنَّ أَيۡدِيَكُمۡ وَأَرۡجُلَكُم مِّنۡ خِلَٰفٖ وَلَأُصَلِّبَنَّكُمۡ أَجۡمَعِينَ﴿٤٩

49ಫರೋಹ ಹೇಳಿದನು: “ನಾನು ಅಪ್ಪಣೆ ಕೊಡುವ ಮೊದಲೇ ನೀವು ಅವನಲ್ಲಿ ವಿಶ್ವಾಸವಿಟ್ಟಿರಾ? ನಿಶ್ಚಯವಾಗಿಯೂ ಅವನು ನಿಮಗೆ ಮಾಟಗಾರಿಕೆಯನ್ನು ಕಲಿಸಿಕೊಟ್ಟ ನಿಮ್ಮ ಮುಖಂಡನಾಗಿದ್ದಾನೆ. ನೀವು ಸದ್ಯವೇ ತಿಳಿಯುವಿರಿ. ಖಂಡಿತವಾಗಿಯೂ ನಾನು ನಿಮ್ಮ ಕೈ-ಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸಿ ನಿಮ್ಮೆಲ್ಲರನ್ನೂ ಶಿಲುಬೆಗೇರಿಸುವೆನು.

قَالُواْ لَا ضَيۡرَۖ إِنَّآ إِلَىٰ رَبِّنَا مُنقَلِبُونَ﴿٥٠

50ಮಾಟಗಾರರು ಹೇಳಿದರು: “ಪರವಾಗಿಲ್ಲ. ನಿಶ್ಚಯವಾಗಿಯೂ ನಾವು ನಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳುವೆವು.

إِنَّا نَطۡمَعُ أَن يَغۡفِرَ لَنَا رَبُّنَا خَطَٰيَٰنَآ أَن كُنَّآ أَوَّلَ ٱلۡمُؤۡمِنِينَ﴿٥١

51ನಾವು ಮೊತ್ತಮೊದಲು ವಿಶ್ವಾಸವಿಟ್ಟ ಜನರಾಗಿರುವುದರಿಂದ ನಮ್ಮ ಪರಿಪಾಲಕನು (ಅಲ್ಲಾಹು) ನಮ್ಮ ಪಾಪಗಳನ್ನು ಕ್ಷಮಿಸುವನೆಂದು ನಮಗೆ ಭರವಸೆಯಿದೆ.”

۞ وَأَوۡحَيۡنَآ إِلَىٰ مُوسَىٰٓ أَنۡ أَسۡرِ بِعِبَادِيٓ إِنَّكُم مُّتَّبَعُونَ﴿٥٢

52ನಾವು ಮೂಸಾರಿಗೆ ದೇವವಾಣಿಯನ್ನು ನೀಡಿದೆವು: “ನೀವು ರಾತ್ರೋರಾತ್ರಿ ನನ್ನ ದಾಸರೊಡನೆ ಹೊರಡಿ. ಖಂಡಿತವಾಗಿಯೂ ಅವರು ನಿಮ್ಮನ್ನು ಹಿಂಬಾಲಿಸಿ ಬರುವರು.”

فَأَرۡسَلَ فِرۡعَوۡنُ فِي ٱلۡمَدَآئِنِ حَٰشِرِينَ﴿٥٣

53ಆಗ ಫರೋಹ ಎಲ್ಲಾ ಪಟ್ಟಣಗಳಿಗೂ ಸೈನಿಕರನ್ನು ಕಳುಹಿಸಿದನು.

إِنَّ هَٰٓؤُلَآءِ لَشِرۡذِمَةٞ قَلِيلُونَ﴿٥٤

54“ನಿಜಕ್ಕೂ ಇವರೊಂದು ಚಿಕ್ಕ ಸಂಖ್ಯೆಯ ಜನರು.

وَإِنَّهُمۡ لَنَا لَغَآئِظُونَ﴿٥٥

55ಆದರೂ ಇವರು ನಮ್ಮನ್ನೇ ರೇಗಿಸುತ್ತಿದ್ದಾರೆ.

وَإِنَّا لَجَمِيعٌ حَٰذِرُونَ﴿٥٦

56ನಿಶ್ಚಯವಾಗಿಯೂ ನಾವು ದೊಡ್ಡ ಸಂಖ್ಯೆಯಲ್ಲಿದ್ದು (ಇವರ ಪಿತೂರಿಯನ್ನು ಸೋಲಿಸಲು) ಸದಾ ಎಚ್ಚರವಾಗಿರಬೇಕಾಗಿದೆ.”

فَأَخۡرَجۡنَٰهُم مِّن جَنَّٰتٖ وَعُيُونٖ﴿٥٧

57ಕೊನೆಗೆ ನಾವು ಅವರನ್ನು ತೋಟಗಳಿಂದ ಮತ್ತು ನೀರಿನ ತೊರೆಗಳಿಂದ ಹೊರಹಾಕಿದೆವು.

وَكُنُوزٖ وَمَقَامٖ كَرِيمٖ﴿٥٨

58ಖಜಾನೆಗಳಿಂದ ಮತ್ತು ಉನ್ನತ ಸ್ಥಾನಮಾನಗಳಿಂದ.

كَذَٰلِكَۖ وَأَوۡرَثۡنَٰهَا بَنِيٓ إِسۡرَٰٓءِيلَ﴿٥٩

59ಇದೇ ರೀತಿ. ನಂತರ ನಾವು ಇಸ್ರಾಯೇಲ್ ಮಕ್ಕಳನ್ನು ಆ ಎಲ್ಲಾ ವಸ್ತುಗಳ ವಾರೀಸುದಾರರನ್ನಾಗಿ ಮಾಡಿದೆವು.

فَأَتۡبَعُوهُم مُّشۡرِقِينَ﴿٦٠

60ಫರೋಹ ಮತ್ತು ಸೈನ್ಯವು ಸೂರ್ಯೋದಯವಾಗುತ್ತಿದ್ದಂತೆ ಅವರನ್ನು ಬೆನ್ನಟ್ಟಿದರು.

فَلَمَّا تَرَٰٓءَا ٱلۡجَمۡعَانِ قَالَ أَصۡحَٰبُ مُوسَىٰٓ إِنَّا لَمُدۡرَكُونَ﴿٦١

61ನಂತರ ಎರಡು ಗುಂಪುಗಳು ಪರಸ್ಪರ ಮುಖಾಮುಖಿಯಾದಾಗ ಮೂಸಾರ ಜೊತೆಗಿದ್ದವರು ಹೇಳಿದರು: “ಅಯ್ಯೋ! ನಾವು ಸಿಕ್ಕಿಬಿದ್ದೆವು.”

قَالَ كَلَّآۖ إِنَّ مَعِيَ رَبِّي سَيَهۡدِينِ﴿٦٢

62ಮೂಸಾ ಹೇಳಿದರು: “ಸಾಧ್ಯವೇ ಇಲ್ಲ. ನನ್ನ ಪರಿಪಾಲಕ (ಅಲ್ಲಾಹು) ನನ್ನ ಜೊತೆಯಲ್ಲೇ ಇದ್ದಾನೆ. ಅವನು ನನಗೆ ಖಂಡಿತ ದಾರಿ ತೋರಿಸುತ್ತಾನೆ.”

فَأَوۡحَيۡنَآ إِلَىٰ مُوسَىٰٓ أَنِ ٱضۡرِب بِّعَصَاكَ ٱلۡبَحۡرَۖ فَٱنفَلَقَ فَكَانَ كُلُّ فِرۡقٖ كَٱلطَّوۡدِ ٱلۡعَظِيمِ﴿٦٣

63ಆಗ ನಾವು ಮೂಸಾರಿಗೆ, “ನಿಮ್ಮ ಕೋಲಿನಿಂದ ಸಮುದ್ರಕ್ಕೆ ಬಡಿಯಿರಿ” ಎಂದು ದೇವವಾಣಿ ನೀಡಿದೆವು. ಆಗ ಸಮುದ್ರವು ಇಬ್ಭಾಗವಾಯಿತು. ಅದರ ಒಂದೊಂದು ಭಾಗವು ಬೃಹತ್ ಪರ್ವತದಂತೆ ನಿಂತಿತು.

وَأَزۡلَفۡنَا ثَمَّ ٱلۡأٓخَرِينَ﴿٦٤

64ನಾವು ಇತರರನ್ನು (ಫರೋಹ‍ನ ಜನರನ್ನು) ಕೂಡ ಅದರ ಸಮೀಪಕ್ಕೆ ತಂದೆವು.

وَأَنجَيۡنَا مُوسَىٰ وَمَن مَّعَهُۥٓ أَجۡمَعِينَ﴿٦٥

65ನಾವು ಮೂಸಾ ಮತ್ತು ಅವರ ಜೊತೆಗಿದ್ದ ಎಲ್ಲರನ್ನೂ ರಕ್ಷಿಸಿದೆವು.

ثُمَّ أَغۡرَقۡنَا ٱلۡأٓخَرِينَ﴿٦٦

66ನಂತರ ಇತರರನ್ನು (ಫರೋಹ‍ ಮತ್ತು ಅವನ ಜನರನ್ನು) ಮುಳುಗಿಸಿ ಬಿಟ್ಟೆವು.

إِنَّ فِي ذَٰلِكَ لَأٓيَةٗۖ وَمَا كَانَ أَكۡثَرُهُم مُّؤۡمِنِينَ﴿٦٧

67ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.

وَإِنَّ رَبَّكَ لَهُوَ ٱلۡعَزِيزُ ٱلرَّحِيمُ﴿٦٨

68ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

وَٱتۡلُ عَلَيۡهِمۡ نَبَأَ إِبۡرَٰهِيمَ﴿٦٩

69ಅವರಿಗೆ ಇಬ್ರಾಹೀಮರ ಸಮಾಚಾರವನ್ನು ಓದಿಕೊಡಿ.

إِذۡ قَالَ لِأَبِيهِ وَقَوۡمِهِۦ مَا تَعۡبُدُونَ﴿٧٠

70ಅವರು ತಮ್ಮ ತಂದೆಯೊಂದಿಗೆ ಮತ್ತು ತಮ್ಮ ಜನರೊಂದಿಗೆ “ನೀವು ಏನನ್ನು ಆರಾಧಿಸುತ್ತಿದ್ದೀರಿ?” ಎಂದು ಕೇಳಿದ ಸಂದರ್ಭ.

قَالُواْ نَعۡبُدُ أَصۡنَامٗا فَنَظَلُّ لَهَا عَٰكِفِينَ﴿٧١

71ಅವರು ಹೇಳಿದರು: “ನಾವು ವಿಗ್ರಹಗಳನ್ನು ಆರಾಧಿಸುತ್ತಿದ್ದೇವೆ ಮತ್ತು ಅವುಗಳ ಮುಂದೆ ಧ್ಯಾನ ಮಾಡುತ್ತಾ ಕೂರುತ್ತೇವೆ.”

قَالَ هَلۡ يَسۡمَعُونَكُمۡ إِذۡ تَدۡعُونَ﴿٧٢

72ಇಬ್ರಾಹೀಮ್ ಕೇಳಿದರು: “ನೀವು ಅವರನ್ನು ಕರೆದು ಪ್ರಾರ್ಥಿಸಿದರೆ ಅವರಿಗೆ ಕೇಳುತ್ತದೆಯೇ?

أَوۡ يَنفَعُونَكُمۡ أَوۡ يَضُرُّونَ﴿٧٣

73ಅಥವಾ ಅವರು ನಿಮಗೆ ಉಪಕಾರ ಅಥವಾ ತೊಂದರೆ ಮಾಡುತ್ತಾರೆಯೇ?”

قَالُواْ بَلۡ وَجَدۡنَآ ءَابَآءَنَا كَذَٰلِكَ يَفۡعَلُونَ﴿٧٤

74ಅವರು ಹೇಳಿದರು: “(ಅದರ ಬಗ್ಗೆ ನಮಗೇನೂ ತಿಳಿದಿಲ್ಲ). ಆದರೆ ನಮ್ಮ ಪೂರ್ವಜರು ಹೀಗೆ ಮಾಡುತ್ತಾ ಬಂದಿದ್ದನ್ನು ನಾವು ನೋಡಿದ್ದೇವೆ.”

قَالَ أَفَرَءَيۡتُم مَّا كُنتُمۡ تَعۡبُدُونَ﴿٧٥

75ಇಬ್ರಾಹೀಮ್ ಕೇಳಿದರು: “ನೀವು ಏನು ಆರಾಧಿಸುತ್ತಿದ್ದೀರಿ ಎಂದು ನೀವು ಆಲೋಚಿಸಿ ನೋಡಿದ್ದೀರಾ?

أَنتُمۡ وَءَابَآؤُكُمُ ٱلۡأَقۡدَمُونَ﴿٧٦

76ನೀವು ಮತ್ತು ನಿಮ್ಮ ಪೂರ್ವ ಪಿತಾಮಹರು?

فَإِنَّهُمۡ عَدُوّٞ لِّيٓ إِلَّا رَبَّ ٱلۡعَٰلَمِينَ﴿٧٧

77ನಿಶ್ಚಯವಾಗಿಯೂ ಅವರು (ಆ ದೇವರುಗಳು) ನನ್ನ ವೈರಿಗಳಾಗಿದ್ದಾರೆ; ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಹೊರತು.

ٱلَّذِي خَلَقَنِي فَهُوَ يَهۡدِينِ﴿٧٨

78ಅವನು (ಅಲ್ಲಾಹು) ಯಾರೆಂದರೆ, ನನ್ನನ್ನು ಸೃಷ್ಟಿಸಿ ನನಗೆ ದಾರಿ ತೋರಿಸಿದವನು.

وَٱلَّذِي هُوَ يُطۡعِمُنِي وَيَسۡقِينِ﴿٧٩

79ನನಗೆ ಆಹಾರ-ಪಾನೀಯಗಳನ್ನು ನೀಡುವವನು.

وَإِذَا مَرِضۡتُ فَهُوَ يَشۡفِينِ﴿٨٠

80ನನಗೆ ಕಾಯಿಲೆ ಬಂದರೆ ಅವನು ಅದನ್ನು ಗುಣಪಡಿಸುತ್ತಾನೆ.

وَٱلَّذِي يُمِيتُنِي ثُمَّ يُحۡيِينِ﴿٨١

81ಅವನು ನನ್ನನ್ನು ಮೃತಪಡಿಸುತ್ತಾನೆ, ನಂತರ ನನಗೆ ಪುನಃ ಜೀವ ನೀಡುತ್ತಾನೆ.

وَٱلَّذِيٓ أَطۡمَعُ أَن يَغۡفِرَ لِي خَطِيٓـَٔتِي يَوۡمَ ٱلدِّينِ﴿٨٢

82ಅವನು ಯಾರೆಂದರೆ, ಪ್ರತಿಫಲ ದಿನದಂದು ನನ್ನ ಪಾಪಗಳನ್ನು ಕ್ಷಮಿಸುವನೆಂದು ನಾನು ಭರವಸೆಯಿಟ್ಟವನು.

رَبِّ هَبۡ لِي حُكۡمٗا وَأَلۡحِقۡنِي بِٱلصَّٰلِحِينَ﴿٨٣

83ನನ್ನ ಪರಿಪಾಲಕನೇ! ನನಗೆ ತೀರ್ಪು ನೀಡುವ ಶಕ್ತಿಯನ್ನು ನೀಡು ಮತ್ತು ನನ್ನನ್ನು ನೀತಿವಂತರಲ್ಲಿ ಸೇರಿಸು.

وَٱجۡعَل لِّي لِسَانَ صِدۡقٖ فِي ٱلۡأٓخِرِينَ﴿٨٤

84ಮುಂಬರುವ ತಲೆಮಾರುಗಳಲ್ಲಿ ನನಗೆ ಅತ್ಯುತ್ತಮ ಕೀರ್ತಿಯನ್ನು ಕರುಣಿಸು.

وَٱجۡعَلۡنِي مِن وَرَثَةِ جَنَّةِ ٱلنَّعِيمِ﴿٨٥

85ಸುಖ ಸಂತೋಷಗಳಿಂದ ಕೂಡಿದ ಸ್ವರ್ಗದ ವಾರಸುದಾರರಲ್ಲಿ ನನ್ನನ್ನು ಸೇರಿಸು.

وَٱغۡفِرۡ لِأَبِيٓ إِنَّهُۥ كَانَ مِنَ ٱلضَّآلِّينَ﴿٨٦

86ನನ್ನ ತಂದೆಯನ್ನು ಕ್ಷಮಿಸು. ನಿಜಕ್ಕೂ ಅವನು ದಾರಿತಪ್ಪಿದವರಲ್ಲಿ ಸೇರಿದ್ದಾನೆ.

وَلَا تُخۡزِنِي يَوۡمَ يُبۡعَثُونَ﴿٨٧

87ಮನುಷ್ಯರಿಗೆ ಜೀವ ನೀಡಿ ಎಬ್ಬಿಸುವ ದಿನದಂದು ನನಗೆ ಅವಮಾನ ಮಾಡಬೇಡ.

يَوۡمَ لَا يَنفَعُ مَالٞ وَلَا بَنُونَ﴿٨٨

88ಅಂದರೆ, ಆಸ್ತಿ ಮತ್ತು ಮಕ್ಕಳು ಯಾವುದೇ ಉಪಕಾರ ಮಾಡದ ದಿನ!

إِلَّا مَنۡ أَتَى ٱللَّهَ بِقَلۡبٖ سَلِيمٖ﴿٨٩

89ಪಾಪಮುಕ್ತ ಹೃದಯದೊಂದಿಗೆ ಅಲ್ಲಾಹನ ಬಳಿ ಬರುವವನ ಹೊರತು.

وَأُزۡلِفَتِ ٱلۡجَنَّةُ لِلۡمُتَّقِينَ﴿٩٠

90ದೇವಭಯವುಳ್ಳವರಿಗೆ ಸ್ವರ್ಗವನ್ನು ಹತ್ತಿರಗೊಳಿಸಲಾಗುವುದು.

وَبُرِّزَتِ ٱلۡجَحِيمُ لِلۡغَاوِينَ﴿٩١

91ದುರ್ಮಾರ್ಗಿಗಳಿಗೆ ನರಕವನ್ನು ತೆರೆದು ತೋರಿಸಲಾಗುವುದು.

وَقِيلَ لَهُمۡ أَيۡنَ مَا كُنتُمۡ تَعۡبُدُونَ﴿٩٢

92ಅವರೊಡನೆ ಕೇಳಲಾಗುವುದು: “ನೀವು ಆರಾಧಿಸುತ್ತಿದ್ದವರು ಎಲ್ಲಿ ಹೋದರು?

مِن دُونِ ٱللَّهِ هَلۡ يَنصُرُونَكُمۡ أَوۡ يَنتَصِرُونَ﴿٩٣

93ಅಲ್ಲಾಹನನ್ನು ಬಿಟ್ಟು. ಅವರು ನಿಮಗೆ ಸಹಾಯ ಮಾಡುತ್ತಾರೆಯೇ? ಅಥವಾ ಅವರು ಅವರಿಗೇ ಸಹಾಯ ಮಾಡುವರೇ?”

فَكُبۡكِبُواْ فِيهَا هُمۡ وَٱلۡغَاوُۥنَ﴿٩٤

94ಆದ್ದರಿಂದ ಅವರನ್ನು (ಆ ದೇವರುಗಳನ್ನು) ಮತ್ತು ದುರ್ಮಾರ್ಗಿಗಳನ್ನು ನರಕಾಗ್ನಿಗೆ ತಲೆಕೆಳಗಾಗಿ ಎಸೆಯಲಾಗುವುದು.

وَجُنُودُ إِبۡلِيسَ أَجۡمَعُونَ﴿٩٥

95ಮತ್ತು ಇಬ್ಲೀಸನ ಸಂಪೂರ್ಣ ಸೈನ್ಯವನ್ನು.

قَالُواْ وَهُمۡ فِيهَا يَخۡتَصِمُونَ﴿٩٦

96ಅಲ್ಲಿ ಅವರು ಪರಸ್ಪರ ತರ್ಕಿಸುತ್ತಾ ಹೇಳುವರು:

تَٱللَّهِ إِن كُنَّا لَفِي ضَلَٰلٖ مُّبِينٍ﴿٩٧

97“ಅಲ್ಲಾಹನಾಣೆ! ನಿಜಕ್ಕೂ ನಾವು ಸ್ಪಷ್ಟವಾಗಿ ದಾರಿತಪ್ಪಿದ್ದೆವು.

إِذۡ نُسَوِّيكُم بِرَبِّ ٱلۡعَٰلَمِينَ﴿٩٨

98ನಾವು ನಿಮ್ಮನ್ನು ಸರ್ವಲೋಕಗಳ ಪರಿಪಾಲಕನಿಗೆ (ಅಲ್ಲಾಹನಿಗೆ) ಸಮಾನರೆಂದು ಕಲ್ಪಿಸಿದಾಗ.

وَمَآ أَضَلَّنَآ إِلَّا ٱلۡمُجۡرِمُونَ﴿٩٩

99ಆ ಅಪರಾಧಿಗಳೇ ನಮ್ಮನ್ನು ದಾರಿತಪ್ಪಿಸಿದ್ದು.

فَمَا لَنَا مِن شَٰفِعِينَ﴿١٠٠

100ಈಗ ನಮಗೆ ಶಿಫಾರಸು ಮಾಡಲು ಯಾರೂ ಇಲ್ಲ.

وَلَا صَدِيقٍ حَمِيمٖ﴿١٠١

101ಆತ್ಮೀಯ ಮಿತ್ರರೂ ಇಲ್ಲ.

فَلَوۡ أَنَّ لَنَا كَرَّةٗ فَنَكُونَ مِنَ ٱلۡمُؤۡمِنِينَ﴿١٠٢

102ನಮಗೆ (ಇಹಲೋಕಕ್ಕೆ) ಮರಳಿ ಹೋಗುವ ಒಂದು ಅವಕಾಶವಿರುತ್ತಿದ್ದರೆ ನಾವು ಸತ್ಯವಿಶ್ವಾಸಿಗಳಲ್ಲಿ ಸೇರುತ್ತಿದ್ದೆವು.”

إِنَّ فِي ذَٰلِكَ لَأٓيَةٗۖ وَمَا كَانَ أَكۡثَرُهُم مُّؤۡمِنِينَ﴿١٠٣

103ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.

وَإِنَّ رَبَّكَ لَهُوَ ٱلۡعَزِيزُ ٱلرَّحِيمُ﴿١٠٤

104ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

كَذَّبَتۡ قَوۡمُ نُوحٍ ٱلۡمُرۡسَلِينَ﴿١٠٥

105ನೂಹರ ಜನರು ಸಂದೇಶವಾಹಕರುಗಳನ್ನು ನಿಷೇಧಿಸಿದರು.

إِذۡ قَالَ لَهُمۡ أَخُوهُمۡ نُوحٌ أَلَا تَتَّقُونَ﴿١٠٦

106ಅವರೊಡನೆ ಅವರ ಸಹೋದರ ನೂಹ್ ಹೇಳಿದ ಸಂದರ್ಭ.“ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?

إِنِّي لَكُمۡ رَسُولٌ أَمِينٞ﴿١٠٧

107ನಿಶ್ಚಯವಾಗಿಯೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.

فَٱتَّقُواْ ٱللَّهَ وَأَطِيعُونِ﴿١٠٨

108ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

وَمَآ أَسۡـَٔلُكُمۡ عَلَيۡهِ مِنۡ أَجۡرٍۖ إِنۡ أَجۡرِيَ إِلَّا عَلَىٰ رَبِّ ٱلۡعَٰلَمِينَ﴿١٠٩

109ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.

فَٱتَّقُواْ ٱللَّهَ وَأَطِيعُونِ﴿١١٠

110ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.”

۞ قَالُوٓاْ أَنُؤۡمِنُ لَكَ وَٱتَّبَعَكَ ٱلۡأَرۡذَلُونَ﴿١١١

111ಅವರು ಹೇಳಿದರು: “ನಾವು ನಿನ್ನನ್ನು ಅನುಸರಿಸಬೇಕೇ? ನಿನ್ನ ಹಿಂದೆಯಿರುವುದು ಕೆಳವರ್ಗದ ಜನರು ಮಾತ್ರ.”

قَالَ وَمَا عِلۡمِي بِمَا كَانُواْ يَعۡمَلُونَ﴿١١٢

112ನೂಹ್ ಹೇಳಿದರು: “ಅವರು ಮೊದಲು ಏನು ಮಾಡುತ್ತಿದ್ದರೆಂದು ನನಗೇನು ಗೊತ್ತು?

إِنۡ حِسَابُهُمۡ إِلَّا عَلَىٰ رَبِّيۖ لَوۡ تَشۡعُرُونَ﴿١١٣

113ಅವರನ್ನು ವಿಚಾರಣೆ ಮಾಡಬೇಕಾದ ಹೊಣೆ ನನ್ನ ಪರಿಪಾಲಕನದ್ದು (ಅಲ್ಲಾಹನದ್ದು). ನಿಮಗೆ ಹಾಗೆ ಅನ್ನಿಸುತ್ತಿದ್ದರೆ!

وَمَآ أَنَا۠ بِطَارِدِ ٱلۡمُؤۡمِنِينَ﴿١١٤

114ನಾನು ಸತ್ಯವಿಶ್ವಾಸಿಗಳನ್ನು ದೂರ ತಳ್ಳುವುದಿಲ್ಲ.

إِنۡ أَنَا۠ إِلَّا نَذِيرٞ مُّبِينٞ﴿١١٥

115ನಾನೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರ ಮಾತ್ರ.”

قَالُواْ لَئِن لَّمۡ تَنتَهِ يَٰنُوحُ لَتَكُونَنَّ مِنَ ٱلۡمَرۡجُومِينَ﴿١١٦

116ಅವರು ಹೇಳಿದರು: “ಓ ನೂಹ್! ನೀನು ಇದನ್ನು ನಿಲ್ಲಿಸದಿದ್ದರೆ ನಾವು ನಿನ್ನನ್ನು ಕಲ್ಲೆಸೆದು ಕೊಲ್ಲುವೆವು.”

قَالَ رَبِّ إِنَّ قَوۡمِي كَذَّبُونِ﴿١١٧

117ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ನನ್ನ ಜನರು ನನ್ನನ್ನು ನಿಷೇಧಿಸಿದ್ದಾರೆ.

فَٱفۡتَحۡ بَيۡنِي وَبَيۡنَهُمۡ فَتۡحٗا وَنَجِّنِي وَمَن مَّعِيَ مِنَ ٱلۡمُؤۡمِنِينَ﴿١١٨

118ಆದ್ದರಿಂದ ನನ್ನ ಮತ್ತು ಅವರ ನಡುವೆ ನಿರ್ಣಾಯಕವಾದ ತೀರ್ಪನ್ನು ನೀಡು. ನನ್ನನ್ನು ಮತ್ತು ನನ್ನ ಜೊತೆಯಲ್ಲಿರುವ ಸತ್ಯವಿಶ್ವಾಸಿಗಳನ್ನು ರಕ್ಷಿಸು.”

فَأَنجَيۡنَٰهُ وَمَن مَّعَهُۥ فِي ٱلۡفُلۡكِ ٱلۡمَشۡحُونِ﴿١١٩

119ಆಗ ನಾವು ಅವರನ್ನು ಮತ್ತು ಅವರ ಜೊತೆಯಲ್ಲಿದ್ದವರನ್ನು ತುಂಬಿ ತುಳುಕುವ ನಾವೆಯಲ್ಲಿ ರಕ್ಷಿಸಿದೆವು.

ثُمَّ أَغۡرَقۡنَا بَعۡدُ ٱلۡبَاقِينَ﴿١٢٠

120ನಂತರ, ಉಳಿದವರನ್ನು ಮುಳುಗಿಸಿ ಕೊಂದೆವು.

إِنَّ فِي ذَٰلِكَ لَأٓيَةٗۖ وَمَا كَانَ أَكۡثَرُهُم مُّؤۡمِنِينَ﴿١٢١

121ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.

وَإِنَّ رَبَّكَ لَهُوَ ٱلۡعَزِيزُ ٱلرَّحِيمُ﴿١٢٢

122ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

كَذَّبَتۡ عَادٌ ٱلۡمُرۡسَلِينَ﴿١٢٣

123ಆದ್ ಗೋತ್ರದವರು ಸಂದೇಶವಾಹಕರುಗಳನ್ನು ನಿಷೇಧಿಸಿದರು.

إِذۡ قَالَ لَهُمۡ أَخُوهُمۡ هُودٌ أَلَا تَتَّقُونَ﴿١٢٤

124ಅವರೊಡನೆ ಅವರ ಸಹೋದರ ಹೂದ್ ಹೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?

إِنِّي لَكُمۡ رَسُولٌ أَمِينٞ﴿١٢٥

125ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.

فَٱتَّقُواْ ٱللَّهَ وَأَطِيعُونِ﴿١٢٦

126ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

وَمَآ أَسۡـَٔلُكُمۡ عَلَيۡهِ مِنۡ أَجۡرٍۖ إِنۡ أَجۡرِيَ إِلَّا عَلَىٰ رَبِّ ٱلۡعَٰلَمِينَ﴿١٢٧

127ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.

أَتَبۡنُونَ بِكُلِّ رِيعٍ ءَايَةٗ تَعۡبَثُونَ﴿١٢٨

128ನೀವು ಎಲ್ಲಾ ಗುಡ್ಡಗಳಲ್ಲೂ ಮೋಜು ಮಸ್ತಿಗಾಗಿ ನಿಶಾನಿಗಳನ್ನು (ಕಟ್ಟಡಗಳನ್ನು) ನಿರ್ಮಿಸುತ್ತಿದ್ದೀರಾ?

وَتَتَّخِذُونَ مَصَانِعَ لَعَلَّكُمۡ تَخۡلُدُونَ﴿١٢٩

129ನೀವು ಮಹಾ ರಚನೆಗಳನ್ನು (ಭವ್ಯ ಸೌಧಗಳನ್ನು) ನಿರ್ಮಿಸುತ್ತಿದ್ದೀರಾ? ನೀವು ಇಲ್ಲೇ ಶಾಶ್ವತವಾಗಿ ವಾಸಿಸುವಿರಿ ಎಂಬ ಕಲ್ಪನೆಯಲ್ಲಿ?

وَإِذَا بَطَشۡتُم بَطَشۡتُمۡ جَبَّارِينَ﴿١٣٠

130ನೀವು ಯಾರನ್ನಾದರೂ ಹಿಡಿಯುವಾಗ ಬಹಳ ಕಠೋರವಾಗಿ ಹಿಡಿಯುತ್ತೀರಿ.

فَٱتَّقُواْ ٱللَّهَ وَأَطِيعُونِ﴿١٣١

131ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

وَٱتَّقُواْ ٱلَّذِيٓ أَمَدَّكُم بِمَا تَعۡلَمُونَ﴿١٣٢

132ನಿಮಗೆ ತಿಳಿದೇ ಇರುವ ವಸ್ತುಗಳ ಮೂಲಕ ನಿಮಗೆ ಸಹಾಯ ಮಾಡಿದವನನ್ನು (ಅಲ್ಲಾಹನನ್ನು) ಭಯಪಡಿರಿ.

أَمَدَّكُم بِأَنۡعَٰمٖ وَبَنِينَ﴿١٣٣

133ಅವನು ನಿಮಗೆ ಜಾನುವಾರುಗಳು ಮತ್ತು ಮಕ್ಕಳು-ಮರಿಗಳನ್ನು ನೀಡಿ ಸಹಾಯ ಮಾಡಿದ್ದಾನೆ.

وَجَنَّٰتٖ وَعُيُونٍ﴿١٣٤

134ತೋಟಗಳು ಮತ್ತು ಚಿಲುಮೆಗಳನ್ನು ನೀಡಿ.

إِنِّيٓ أَخَافُ عَلَيۡكُمۡ عَذَابَ يَوۡمٍ عَظِيمٖ﴿١٣٥

135ಆ ಭಯಾನಕ ದಿನದ ಶಿಕ್ಷೆಯು ನಿಮ್ಮ ಮೇಲೆರಗಬಹುದೆಂದು ನನಗೆ ಭಯವಾಗುತ್ತಿದೆ.”

قَالُواْ سَوَآءٌ عَلَيۡنَآ أَوَعَظۡتَ أَمۡ لَمۡ تَكُن مِّنَ ٱلۡوَٰعِظِينَ﴿١٣٦

136ಅವರು ಹೇಳಿದರು: “ನೀನು ನಮಗೆ ಉಪದೇಶ ಮಾಡಿದರೂ ಅಥವಾ ಉಪದೇಶ ಮಾಡದಿದ್ದರೂ ನಮ್ಮ ಮಟ್ಟಿಗೆ ಅದು ಸಮಾನವಾಗಿದೆ.

إِنۡ هَٰذَآ إِلَّا خُلُقُ ٱلۡأَوَّلِينَ﴿١٣٧

137ಇದು ಪ್ರಾಚೀನ ಕಾಲದ ಜನರ ವರ್ತನೆಯಾಗಿದೆ.

وَمَا نَحۡنُ بِمُعَذَّبِينَ﴿١٣٨

138ನಾವು ಎಂದಿಗೂ ಶಿಕ್ಷೆಗೆ ಗುರಿಯಾಗುವುದಿಲ್ಲ.”

فَكَذَّبُوهُ فَأَهۡلَكۡنَٰهُمۡۚ إِنَّ فِي ذَٰلِكَ لَأٓيَةٗۖ وَمَا كَانَ أَكۡثَرُهُم مُّؤۡمِنِينَ﴿١٣٩

139ಅವರು ಹೂದರನ್ನು ನಿಷೇಧಿಸಿದರು. ಆದ್ದರಿಂದ ನಾವು ಅವರನ್ನು ನಾಶ ಮಾಡಿದೆವು. ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.

وَإِنَّ رَبَّكَ لَهُوَ ٱلۡعَزِيزُ ٱلرَّحِيمُ﴿١٤٠

140ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

كَذَّبَتۡ ثَمُودُ ٱلۡمُرۡسَلِينَ﴿١٤١

141ಸಮೂದ್ ಗೋತ್ರದವರು ಸಂದೇಶವಾಹಕರುಗಳನ್ನು ನಿಷೇಧಿಸಿದರು.

إِذۡ قَالَ لَهُمۡ أَخُوهُمۡ صَٰلِحٌ أَلَا تَتَّقُونَ﴿١٤٢

142ಅವರೊಡನೆ ಅವರ ಸಹೋದರ ಸಾಲಿಹ್ ಕೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?

إِنِّي لَكُمۡ رَسُولٌ أَمِينٞ﴿١٤٣

143ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.

فَٱتَّقُواْ ٱللَّهَ وَأَطِيعُونِ﴿١٤٤

144ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

وَمَآ أَسۡـَٔلُكُمۡ عَلَيۡهِ مِنۡ أَجۡرٍۖ إِنۡ أَجۡرِيَ إِلَّا عَلَىٰ رَبِّ ٱلۡعَٰلَمِينَ﴿١٤٥

145ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.

أَتُتۡرَكُونَ فِي مَا هَٰهُنَآ ءَامِنِينَ﴿١٤٦

146ಇಲ್ಲಿರುವ ವಸ್ತುಗಳೊಂದಿಗೆ ನಿರ್ಭಯದಿಂದ ಜೀವಿಸಲು ನಿಮ್ಮನ್ನು ಬಿಟ್ಟುಬಿಡಲಾಗುವುದೇ?

فِي جَنَّٰتٖ وَعُيُونٖ﴿١٤٧

147ಅಂದರೆ ಈ ತೋಟಗಳು ಮತ್ತು ಕಾಲುವೆಗಳೊಂದಿಗೆ.

وَزُرُوعٖ وَنَخۡلٖ طَلۡعُهَا هَضِيمٞ﴿١٤٨

148ಈ ಹೊಲಗಳು ಮತ್ತು ಮೃದು ಹಾಗೂ ರುಚಿಯಾದ ಹಣ್ಣುಗಳಿರುವ ಖರ್ಜೂರದ ಮರಗಳೊಂದಿಗೆ.

وَتَنۡحِتُونَ مِنَ ٱلۡجِبَالِ بُيُوتٗا فَٰرِهِينَ﴿١٤٩

149ನೀವು ಕೌಶಲ್ಯದಿಂದ ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸುತ್ತೀರಿ.

فَٱتَّقُواْ ٱللَّهَ وَأَطِيعُونِ﴿١٥٠

150ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

وَلَا تُطِيعُوٓاْ أَمۡرَ ٱلۡمُسۡرِفِينَ﴿١٥١

151ಹದ್ದು ಮೀರಿದವರ ಆಜ್ಞೆಗಳನ್ನು ಅನುಸರಿಸಬೇಡಿ.

ٱلَّذِينَ يُفۡسِدُونَ فِي ٱلۡأَرۡضِ وَلَا يُصۡلِحُونَ﴿١٥٢

152ಅವರು ಯಾರೆಂದರೆ, ಭೂಮಿಯಲ್ಲಿ ಕಿಡಿಗೇಡಿತನ ಮಾಡುವವರು; ಸುಧಾರಣೆ ಮಾಡದವರು.”

قَالُوٓاْ إِنَّمَآ أَنتَ مِنَ ٱلۡمُسَحَّرِينَ﴿١٥٣

153ಅವರು ಹೇಳಿದರು: “ನೀನು ಮಾಟ ಬಾಧಿತ ಜನರಲ್ಲಿ ಒಬ್ಬನಾಗಿರುವೆ.

مَآ أَنتَ إِلَّا بَشَرٞ مِّثۡلُنَا فَأۡتِ بِـَٔايَةٍ إِن كُنتَ مِنَ ٱلصَّٰدِقِينَ﴿١٥٤

154ನೀನು ನಮ್ಮಂತಿರುವ ಒಬ್ಬ ಮನುಷ್ಯನಲ್ಲದೆ ಇನ್ನೇನೂ ಅಲ್ಲ. ನೀನು ಸತ್ಯವನ್ನೇ ಹೇಳುತ್ತಿದ್ದರೆ ಯಾವುದಾದರೂ ದೃಷ್ಟಾಂತವನ್ನು ತಂದು ತೋರಿಸು.”

قَالَ هَٰذِهِۦ نَاقَةٞ لَّهَا شِرۡبٞ وَلَكُمۡ شِرۡبُ يَوۡمٖ مَّعۡلُومٖ﴿١٥٥

155ಸಾಲಿಹ್ ಹೇಳಿದರು: “ನೋಡಿ! ಇದು ಒಂಟೆ. ಇದಕ್ಕೆ ನೀರು ಕುಡಿಯಲು ಒಂದು ಸರದಿಯಿದೆ. ನಿಮಗೂ ಕೂಡ ನೀರು ಕುಡಿಯುವ ಒಂದು ನಿಶ್ಚಿತ ದಿನವಿದೆ.

وَلَا تَمَسُّوهَا بِسُوٓءٖ فَيَأۡخُذَكُمۡ عَذَابُ يَوۡمٍ عَظِيمٖ﴿١٥٦

156ಆದ್ದರಿಂದ ಇದಕ್ಕೆ ಯಾವುದೇ ತೊಂದರೆ ಕೊಡಬೇಡಿ. ಹಾಗೇನಾದರೂ ಆದರೆ ಭಯಾನಕ ದಿನದ ಶಿಕ್ಷೆಯು ನಿಮ್ಮನ್ನು ಹಿಡಿಯುವುದು.”

فَعَقَرُوهَا فَأَصۡبَحُواْ نَٰدِمِينَ﴿١٥٧

157ಆದರೂ ಅವರು ಅದರ ಕಾಲುಗಳನ್ನು ಕಡಿದು ಸಾಯಿಸಿದರು. ನಂತರ (ಶಿಕ್ಷೆಯನ್ನು ಕಂಡಾಗ) ಅವರು ಮರುಗಿದರು.

فَأَخَذَهُمُ ٱلۡعَذَابُۚ إِنَّ فِي ذَٰلِكَ لَأٓيَةٗۖ وَمَا كَانَ أَكۡثَرُهُم مُّؤۡمِنِينَ﴿١٥٨

158ಶಿಕ್ಷೆಯು ಅವರನ್ನು ಹಿಡಿದು ಬಿಟ್ಟಿತು. ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.

وَإِنَّ رَبَّكَ لَهُوَ ٱلۡعَزِيزُ ٱلرَّحِيمُ﴿١٥٩

159ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

كَذَّبَتۡ قَوۡمُ لُوطٍ ٱلۡمُرۡسَلِينَ﴿١٦٠

160ಲೂತರ ಜನರು ಸಂದೇಶವಾಹಕರುಗಳನ್ನು ನಿಷೇಧಿಸಿದರು.

إِذۡ قَالَ لَهُمۡ أَخُوهُمۡ لُوطٌ أَلَا تَتَّقُونَ﴿١٦١

161ಅವರೊಡನೆ ಅವರ ಸಹೋದರ ಲೂತ್ ಹೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?

إِنِّي لَكُمۡ رَسُولٌ أَمِينٞ﴿١٦٢

162ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.

فَٱتَّقُواْ ٱللَّهَ وَأَطِيعُونِ﴿١٦٣

163ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

وَمَآ أَسۡـَٔلُكُمۡ عَلَيۡهِ مِنۡ أَجۡرٍۖ إِنۡ أَجۡرِيَ إِلَّا عَلَىٰ رَبِّ ٱلۡعَٰلَمِينَ﴿١٦٤

164ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.

أَتَأۡتُونَ ٱلذُّكۡرَانَ مِنَ ٱلۡعَٰلَمِينَ﴿١٦٥

165ನೀವು (ತೆವಲು ತೀರಿಸಿಕೊಳ್ಳಲು) ಸರ್ವಲೋಕದವರ ಪೈಕಿ ಕೇವಲ ಪುರುಷರ ಬಳಿಗೆ ಹೋಗುತ್ತೀರಾ?

وَتَذَرُونَ مَا خَلَقَ لَكُمۡ رَبُّكُم مِّنۡ أَزۡوَٰجِكُمۚ بَلۡ أَنتُمۡ قَوۡمٌ عَادُونَ﴿١٦٦

166ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೋಸ್ಕರ ಸೃಷ್ಟಿಸಿದ ನಿಮ್ಮ ಪತ್ನಿಯರನ್ನು ಬಿಟ್ಟುಬಿಡುತ್ತೀರಾ? ಅಲ್ಲ, ವಾಸ್ತವವಾಗಿ ನೀವು ಹದ್ದು ಮೀರಿದ ಜನರಾಗಿದ್ದೀರಿ.”

قَالُواْ لَئِن لَّمۡ تَنتَهِ يَٰلُوطُ لَتَكُونَنَّ مِنَ ٱلۡمُخۡرَجِينَ﴿١٦٧

167ಅವರು ಹೇಳಿದರು: “ಓ ಲೂತ್! ನೀನು ಇದನ್ನು ನಿಲ್ಲಿಸದಿದ್ದರೆ ನಾವು ನಿನ್ನನ್ನು ಖಂಡಿತ ಊರಿನಿಂದ ಓಡಿಸುವೆವು.”

قَالَ إِنِّي لِعَمَلِكُم مِّنَ ٱلۡقَالِينَ﴿١٦٨

168ಲೂತ್ ಹೇಳಿದರು: “ನಿಶ್ಚಯವಾಗಿಯೂ ನೀವು ಮಾಡುತ್ತಿರುವ ಈ ಕೃತ್ಯವನ್ನು ನಾನು ಬಹಳ ದ್ವೇಷಿಸುತ್ತೇನೆ.

رَبِّ نَجِّنِي وَأَهۡلِي مِمَّا يَعۡمَلُونَ﴿١٦٩

169ಓ ನನ್ನ ಪರಿಪಾಲಕನೇ! ನನ್ನನ್ನು ಮತ್ತು ನನ್ನ ಕುಟುಂಬವನ್ನು ಇವರು ಮಾಡುವ ಈ ಕೃತ್ಯದಿಂದ ರಕ್ಷಿಸು.”

فَنَجَّيۡنَٰهُ وَأَهۡلَهُۥٓ أَجۡمَعِينَ﴿١٧٠

170ಆದ್ದರಿಂದ ನಾವು ಅವರನ್ನು ಮತ್ತು ಅವರ ಕುಟುಂಬದವರನ್ನು ರಕ್ಷಿಸಿದೆವು.

إِلَّا عَجُوزٗا فِي ٱلۡغَٰبِرِينَ﴿١٧١

171ಒಬ್ಬ ಮುದುಕಿಯ ಹೊರತು. ಆಕೆ ಹಿಂದೆ ಉಳಿದವರಲ್ಲಿ ಸೇರಿದಳು.

ثُمَّ دَمَّرۡنَا ٱلۡأٓخَرِينَ﴿١٧٢

172ನಂತರ ನಾವು ಅವರೆಲ್ಲರನ್ನೂ ನಾಶ ಮಾಡಿದೆವು.

وَأَمۡطَرۡنَا عَلَيۡهِم مَّطَرٗاۖ فَسَآءَ مَطَرُ ٱلۡمُنذَرِينَ﴿١٧٣

173ನಾವು ಅವರ ಮೇಲೆ ಒಂದು ವಿಶೇಷ ಮಳೆಯನ್ನು ಸುರಿಸಿದೆವು. ಎಚ್ಚರಿಕೆ ನೀಡಲಾದವರ ಮೇಲೆ ಸುರಿದ ಆ ಮಳೆಯು ಬಹಳ ನಿಕೃಷ್ಟವಾಗಿದೆ.

إِنَّ فِي ذَٰلِكَ لَأٓيَةٗۖ وَمَا كَانَ أَكۡثَرُهُم مُّؤۡمِنِينَ﴿١٧٤

174ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.

وَإِنَّ رَبَّكَ لَهُوَ ٱلۡعَزِيزُ ٱلرَّحِيمُ﴿١٧٥

175ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

كَذَّبَ أَصۡحَٰبُ لۡـَٔيۡكَةِ ٱلۡمُرۡسَلِينَ﴿١٧٦

176ಐಕತ್‌ನ ಜನರು (ಮದ್ಯನ್ ದೇಶದವರು) ಸಂದೇಶವಾಹಕರುಗಳನ್ನು ನಿಷೇಧಿಸಿದರು.

إِذۡ قَالَ لَهُمۡ شُعَيۡبٌ أَلَا تَتَّقُونَ﴿١٧٧

177ಅವರೊಡನೆ ಶುಐಬರು ಕೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?

إِنِّي لَكُمۡ رَسُولٌ أَمِينٞ﴿١٧٨

178ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.

فَٱتَّقُواْ ٱللَّهَ وَأَطِيعُونِ﴿١٧٩

179ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

وَمَآ أَسۡـَٔلُكُمۡ عَلَيۡهِ مِنۡ أَجۡرٍۖ إِنۡ أَجۡرِيَ إِلَّا عَلَىٰ رَبِّ ٱلۡعَٰلَمِينَ﴿١٨٠

180ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.

۞ أَوۡفُواْ ٱلۡكَيۡلَ وَلَا تَكُونُواْ مِنَ ٱلۡمُخۡسِرِينَ﴿١٨١

181ಅಳತೆಯನ್ನು ಪೂರ್ತಿಯಾಗಿ ಕೊಡಿ. ಜನರಿಗೆ ನಷ್ಟ ಮಾಡುವವರಲ್ಲಿ ಸೇರಬೇಡಿ.

وَزِنُواْ بِٱلۡقِسۡطَاسِ ٱلۡمُسۡتَقِيمِ﴿١٨٢

182ಸರಿಯಾದ ತಕ್ಕಡಿಯಲ್ಲಿ ತೂಕ ಮಾಡಿರಿ.

وَلَا تَبۡخَسُواْ ٱلنَّاسَ أَشۡيَآءَهُمۡ وَلَا تَعۡثَوۡاْ فِي ٱلۡأَرۡضِ مُفۡسِدِينَ﴿١٨٣

183ಜನರಿಗೆ ಅವರ ವಸ್ತುಗಳನ್ನು ಕಡಿಮೆ ಮಾಡಬೇಡಿ. ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಾ ಅಲೆಯಬೇಡಿ.

وَٱتَّقُواْ ٱلَّذِي خَلَقَكُمۡ وَٱلۡجِبِلَّةَ ٱلۡأَوَّلِينَ﴿١٨٤

184ನಿಮ್ಮನ್ನು ಮತ್ತು ನಿಮಗಿಂತ ಮೊದಲಿನ ಜನರನ್ನು ಸೃಷ್ಟಿಸಿದ ಅಲ್ಲಾಹನನ್ನು ಭಯಪಡಿರಿ.”

قَالُوٓاْ إِنَّمَآ أَنتَ مِنَ ٱلۡمُسَحَّرِينَ﴿١٨٥

185ಅವರು ಹೇಳಿದರು: “ನಿಶ್ಚಯವಾಗಿಯೂ ನೀನು ಮಾಟ ಬಾಧಿತ ಜನರಲ್ಲಿ ಒಬ್ಬನಾಗಿರುವೆ.

وَمَآ أَنتَ إِلَّا بَشَرٞ مِّثۡلُنَا وَإِن نَّظُنُّكَ لَمِنَ ٱلۡكَٰذِبِينَ﴿١٨٦

186ನೀನು ನಮ್ಮಂತಿರುವ ಒಬ್ಬ ಮನುಷ್ಯನಲ್ಲದೆ ಇನ್ನೇನೂ ಅಲ್ಲ. ನಿಶ್ಚಯವಾಗಿಯೂ ನೀನು ಸುಳ್ಳು ಹೇಳುತ್ತಿದ್ದೀಯೆಂದೇ ನಾವು ಭಾವಿಸುತ್ತೇವೆ.

فَأَسۡقِطۡ عَلَيۡنَا كِسَفٗا مِّنَ ٱلسَّمَآءِ إِن كُنتَ مِنَ ٱلصَّٰدِقِينَ﴿١٨٧

187ನೀನು ಹೇಳುವುದು ನಿಜವೇ ಆಗಿದ್ದರೆ ಆಕಾಶದಿಂದ (ನಮ್ಮ ಮೇಲೆ) ತುಣುಕುಗಳು ಬೀಳುವಂತೆ ಮಾಡು.”

قَالَ رَبِّيٓ أَعۡلَمُ بِمَا تَعۡمَلُونَ﴿١٨٨

188ಶುಐಬ್ ಹೇಳಿದರು: “ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ನನ್ನ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ.”

فَكَذَّبُوهُ فَأَخَذَهُمۡ عَذَابُ يَوۡمِ ٱلظُّلَّةِۚ إِنَّهُۥ كَانَ عَذَابَ يَوۡمٍ عَظِيمٍ﴿١٨٩

189ಅವರು ಶುಐಬರನ್ನು ನಿಷೇಧಿಸಿದರು. ಆದ್ದರಿಂದ ಮೋಡದ ನೆರಳು ಮುಸುಕಿದ ದಿನದ ಶಿಕ್ಷೆಯು ಅವರನ್ನು ಹಿಡಿಯಿತು. ನಿಜಕ್ಕೂ ಅದೊಂದು ಭಯಾನಕ ದಿನದ ಶಿಕ್ಷೆಯಾಗಿತ್ತು.

إِنَّ فِي ذَٰلِكَ لَأٓيَةٗۖ وَمَا كَانَ أَكۡثَرُهُم مُّؤۡمِنِينَ﴿١٩٠

190ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.

وَإِنَّ رَبَّكَ لَهُوَ ٱلۡعَزِيزُ ٱلرَّحِيمُ﴿١٩١

191ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

وَإِنَّهُۥ لَتَنزِيلُ رَبِّ ٱلۡعَٰلَمِينَ﴿١٩٢

192ನಿಶ್ಚಯವಾಗಿಯೂ ಈ ಕುರ್‌ಆನ್ ಸರ್ವಲೋಕಗಳ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾಗಿದೆ.

نَزَلَ بِهِ ٱلرُّوحُ ٱلۡأَمِينُ﴿١٩٣

193ವಿಶ್ವಸ್ತ ಆತ್ಮ (ಜಿಬ್ರೀಲ್) ಇದರೊಂದಿಗೆ ಇಳಿದು ಬಂದಿದ್ದಾರೆ.

عَلَىٰ قَلۡبِكَ لِتَكُونَ مِنَ ٱلۡمُنذِرِينَ﴿١٩٤

194ನಿಮ್ಮ (ಪ್ರವಾದಿಯ) ಹೃದಯಕ್ಕೆ. ನೀವು ಮುನ್ನೆಚ್ಚರಿಕೆ ನೀಡುವವರಲ್ಲಿ ಸೇರಲೆಂದು.

بِلِسَانٍ عَرَبِيّٖ مُّبِينٖ﴿١٩٥

195ಸ್ಪಷ್ಟ ಅರಬ್ಬಿ ಭಾಷೆಯಲ್ಲಿ.

وَإِنَّهُۥ لَفِي زُبُرِ ٱلۡأَوَّلِينَ﴿١٩٦

196ನಿಶ್ಚಯವಾಗಿಯೂ ಪೂರ್ವಕಾಲದವರ ಗ್ರಂಥಗಳಲ್ಲಿ ಇದರ ಬಗ್ಗೆ ಉಲ್ಲೇಖವಿದೆ.

أَوَلَمۡ يَكُن لَّهُمۡ ءَايَةً أَن يَعۡلَمَهُۥ عُلَمَٰٓؤُاْ بَنِيٓ إِسۡرَٰٓءِيلَ﴿١٩٧

197ಇಸ್ರಾಯೇಲ್ ಮಕ್ಕಳಲ್ಲಿರುವ ವಿದ್ವಾಂಸರು ಕೂಡ ಇದರ ಸತ್ಯತೆಯನ್ನು ತಿಳಿದಿದ್ದಾರೆ ಎನ್ನುವುದು ಇವರಿಗೆ (ಸತ್ಯನಿಷೇಧಿಗಳಿಗೆ) ಒಂದು ದೃಷ್ಟಾಂತವಾಗುವುದಿಲ್ಲವೇ?

وَلَوۡ نَزَّلۡنَٰهُ عَلَىٰ بَعۡضِ ٱلۡأَعۡجَمِينَ﴿١٩٨

198ನಾವು ಅದನ್ನು ಅರಬ್ಬೇತರ ವ್ಯಕ್ತಿಗೆ ಅವತೀರ್ಣಗೊಳಿಸಿ,

فَقَرَأَهُۥ عَلَيۡهِم مَّا كَانُواْ بِهِۦ مُؤۡمِنِينَ﴿١٩٩

199ನಂತರ ಆತ ಅದನ್ನು ಇವರಿಗೆ ಓದಿಕೊಟ್ಟರೂ ಇವರು ಅದರಲ್ಲಿ ವಿಶ್ವಾಸವಿಡುವುದಿಲ್ಲ.

كَذَٰلِكَ سَلَكۡنَٰهُ فِي قُلُوبِ ٱلۡمُجۡرِمِينَ﴿٢٠٠

200ಈ ರೀತಿ ನಾವು ಅಪರಾಧಿಗಳ ಹೃದಯಗಳಲ್ಲಿ ಅದನ್ನು (ಸತ್ಯನಿಷೇಧವನ್ನು) ತೂರಿಸಿದ್ದೇವೆ.

لَا يُؤۡمِنُونَ بِهِۦ حَتَّىٰ يَرَوُاْ ٱلۡعَذَابَ ٱلۡأَلِيمَ﴿٢٠١

201ಯಾತನಾಮಯ ಶಿಕ್ಷೆಯನ್ನು ನೋಡುವ ತನಕ ಅವರು ಅದರಲ್ಲಿ ವಿಶ್ವಾಸವಿಡುವುದಿಲ್ಲ.

فَيَأۡتِيَهُم بَغۡتَةٗ وَهُمۡ لَا يَشۡعُرُونَ﴿٢٠٢

202ಅದು ಹಠಾತ್ತನೆ ಅವರ ಬಳಿಗೆ ಬರುತ್ತದೆ. ಅವರು ಅದನ್ನು ನಿರೀಕ್ಷಿಸಿಯೇ ಇರುವುದಿಲ್ಲ.

فَيَقُولُواْ هَلۡ نَحۡنُ مُنظَرُونَ﴿٢٠٣

203ಅವರು ಕೇಳುತ್ತಾರೆ: “ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ?”

أَفَبِعَذَابِنَا يَسۡتَعۡجِلُونَ﴿٢٠٤

204ಹಾಗಾದರೆ ಅವರು ನಮ್ಮ ಶಿಕ್ಷೆಗಾಗಿ ತ್ವರೆ ಮಾಡುತ್ತಿದ್ದಾರೆಯೇ?

أَفَرَءَيۡتَ إِن مَّتَّعۡنَٰهُمۡ سِنِينَ﴿٢٠٥

205ನೀವು ಆಲೋಚಿಸಿ ನೋಡಿದ್ದೀರಾ? ನಾವು ಅವರಿಗೆ ಅನೇಕ ವರ್ಷಗಳ ತನಕ ಸವಲತ್ತುಗಳನ್ನು ನೀಡಿ,

ثُمَّ جَآءَهُم مَّا كَانُواْ يُوعَدُونَ﴿٢٠٦

206ನಂತರ ಅವರಿಗೆ ವಾಗ್ದಾನ ಮಾಡಲಾದ ಶಿಕ್ಷೆಯು ಅವರ ಬಳಿಗೆ ಬಂದರೆ,

مَآ أَغۡنَىٰ عَنۡهُم مَّا كَانُواْ يُمَتَّعُونَ﴿٢٠٧

207ಅವರಿಗೆ ನೀಡಲಾದ ಯಾವುದೇ ಸವಲತ್ತುಗಳು ಅವರಿಗೆ ಪ್ರಯೋಜನ ನೀಡುವುದಿಲ್ಲ.

وَمَآ أَهۡلَكۡنَا مِن قَرۡيَةٍ إِلَّا لَهَا مُنذِرُونَ﴿٢٠٨

208ನಾವು ಯಾವುದೇ ಊರನ್ನು, ಅದಕ್ಕೆ ಮುನ್ನೆಚ್ಚರಿಕೆ ನೀಡುವವರನ್ನು (ಪ್ರವಾದಿಗಳನ್ನು) ಕಳುಹಿಸಿದ ನಂತರವಲ್ಲದೆ ನಾಶ ಮಾಡಿಲ್ಲ.

ذِكۡرَىٰ وَمَا كُنَّا ظَٰلِمِينَ﴿٢٠٩

209ಇದೊಂದು ಉಪದೇಶ ಮಾತ್ರ. ನಾವು ಎಂದಿಗೂ ಅನ್ಯಾಯ ಮಾಡುವುದಿಲ್ಲ.

وَمَا تَنَزَّلَتۡ بِهِ ٱلشَّيَٰطِينُ﴿٢١٠

210ಶೈತಾನರು ಈ ಕುರ್‌ಆನನ್ನು ತಂದಿಲ್ಲ.

وَمَا يَنۢبَغِي لَهُمۡ وَمَا يَسۡتَطِيعُونَ﴿٢١١

211ಅದು ಅವರಿಗೆ ಯೋಗ್ಯವೂ ಅಲ್ಲ. ಅವರಿಗೆ ಅಂತಹ ಸಾಮರ್ಥ್ಯವೂ ಇಲ್ಲ.

إِنَّهُمۡ عَنِ ٱلسَّمۡعِ لَمَعۡزُولُونَ﴿٢١٢

212ವಾಸ್ತವವಾಗಿ, ಅವರನ್ನು (ದೇವವಾಣಿಗೆ) ಕಿವಿಗೊಡದಂತೆ ದೂರ ಸರಿಸಲಾಗಿದೆ.

فَلَا تَدۡعُ مَعَ ٱللَّهِ إِلَٰهًا ءَاخَرَ فَتَكُونَ مِنَ ٱلۡمُعَذَّبِينَ﴿٢١٣

213ಆದ್ದರಿಂದ ನೀವು ಅಲ್ಲಾಹನ ಜೊತೆಗೆ ಬೇರೆ ದೇವರುಗಳನ್ನು ಕರೆದು ಪ್ರಾರ್ಥಿಸಬೇಡಿ. ಹಾಗೇನಾದರೂ ಆದರೆ ನೀವು ಶಿಕ್ಷಗೆ ಗುರಿಯಾದವರಲ್ಲಿ ಸೇರುವಿರಿ.

وَأَنذِرۡ عَشِيرَتَكَ ٱلۡأَقۡرَبِينَ﴿٢١٤

214ನಿಮ್ಮ ಹತ್ತಿರದ ಸಂಬಂಧಿಕರಿಗೆ ಎಚ್ಚರಿಕೆ ನೀಡಿರಿ.

وَٱخۡفِضۡ جَنَاحَكَ لِمَنِ ٱتَّبَعَكَ مِنَ ٱلۡمُؤۡمِنِينَ﴿٢١٥

215ನಿಮ್ಮನ್ನು ಅನುಸರಿಸಿದ ಸತ್ಯವಿಶ್ವಾಸಿಗಳಿಗೆ ನಿಮ್ಮ ರೆಕ್ಕೆಯನ್ನು ತಗ್ಗಿಸಿಕೊಡಿ (ಅವರೊಡನೆ ಸೌಮ್ಯವಾಗಿ ವರ್ತಿಸಿ).

فَإِنۡ عَصَوۡكَ فَقُلۡ إِنِّي بَرِيٓءٞ مِّمَّا تَعۡمَلُونَ﴿٢١٦

216ಅವರು ನಿಮ್ಮ ಮಾತನ್ನು ಕೇಳದಿದ್ದರೆ, ಹೇಳಿರಿ: “ನೀವು ಮಾಡುವ ಕರ್ಮಗಳಿಗೆ ನಾನು ಹೊಣೆಯಲ್ಲ.”

وَتَوَكَّلۡ عَلَى ٱلۡعَزِيزِ ٱلرَّحِيمِ﴿٢١٧

217ಪ್ರಬಲನು ಮತ್ತು ದಯೆ ತೋರುವವನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡಿ.

ٱلَّذِي يَرَىٰكَ حِينَ تَقُومُ﴿٢١٨

218ಅವನು ಯಾರೆಂದರೆ, ನೀವು ನಿಲ್ಲುವಾಗ ನಿಮ್ಮನ್ನು ನೋಡುವವನು.

وَتَقَلُّبَكَ فِي ٱلسَّٰجِدِينَ﴿٢١٩

219ಸಾಷ್ಟಾಂಗ ಮಾಡುವವರ ಜೊತೆಗಿನ ತಮ್ಮ ಚಲನವಲನಗಳನ್ನೂ ಕೂಡ.

إِنَّهُۥ هُوَ ٱلسَّمِيعُ ٱلۡعَلِيمُ﴿٢٢٠

220ನಿಶ್ಚಯವಾಗಿಯೂ ಅವನು ಎಲ್ಲವನ್ನೂ ಕೇಳುವವನು ಮತ್ತು ಸರ್ವಜ್ಞನಾಗಿದ್ದಾನೆ.

هَلۡ أُنَبِّئُكُمۡ عَلَىٰ مَن تَنَزَّلُ ٱلشَّيَٰطِينُ﴿٢٢١

221ಶೈತಾನರು ಯಾರ ಮೇಲೆ ಇಳಿಯುತ್ತಾರೆಂದು ನಾನು ನಿಮಗೆ ತಿಳಿಸಿಕೊಡಲೇ?

تَنَزَّلُ عَلَىٰ كُلِّ أَفَّاكٍ أَثِيمٖ﴿٢٢٢

222ಪ್ರತಿಯೊಬ್ಬ ಸುಳ್ಳುಗಾರ ಪಾಪಿಯ ಮೇಲೆ ಅವರು ಇಳಿಯುತ್ತಾರೆ.

يُلۡقُونَ ٱلسَّمۡعَ وَأَكۡثَرُهُمۡ كَٰذِبُونَ﴿٢٢٣

223ಅವರು ಕೇಳಿದ್ದೆಲ್ಲವನ್ನೂ ತಲುಪಿಸುತ್ತಾರೆ. ಅವರಲ್ಲಿ ಹೆಚ್ಚಿನವರು ಸುಳ್ಳರಾಗಿದ್ದಾರೆ.

وَٱلشُّعَرَآءُ يَتَّبِعُهُمُ ٱلۡغَاوُۥنَ﴿٢٢٤

224ಕವಿಗಳನ್ನು ದುರ್ಮಾರ್ಗಿಗಳು ಹಿಂಬಾಲಿಸುತ್ತಾರೆ.

أَلَمۡ تَرَ أَنَّهُمۡ فِي كُلِّ وَادٖ يَهِيمُونَ﴿٢٢٥

225ಅವರು (ಕವಿಗಳು) ಎಲ್ಲ ಕಣಿವೆಗಳಲ್ಲೂ ವಿಹರಿಸುವುದನ್ನು ನೀವು ನೋಡಿಲ್ಲವೇ?

وَأَنَّهُمۡ يَقُولُونَ مَا لَا يَفۡعَلُونَ﴿٢٢٦

226ಅವರು ಮಾಡದ ಕೆಲಸಗಳನ್ನು ಅವರು ಹೇಳುತ್ತಾರೆ.

إِلَّا ٱلَّذِينَ ءَامَنُواْ وَعَمِلُواْ ٱلصَّٰلِحَٰتِ وَذَكَرُواْ ٱللَّهَ كَثِيرٗا وَٱنتَصَرُواْ مِنۢ بَعۡدِ مَا ظُلِمُواْۗ وَسَيَعۡلَمُ ٱلَّذِينَ ظَلَمُوٓاْ أَيَّ مُنقَلَبٖ يَنقَلِبُونَ﴿٢٢٧

227ಆದರೆ ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗಿದವರು, ಅಲ್ಲಾಹನನ್ನು ಅತ್ಯಧಿಕ ಸ್ಮರಿಸುವವರು, ಮರ್ದನಕ್ಕೊಳಗಾದ ಬಳಿಕ ಪ್ರತೀಕಾರ ಪಡೆಯುವವರು ಇದರಿಂದ ಹೊರತಾಗಿದ್ದಾರೆ. ಅಕ್ರಮವೆಸಗಿದವರು ಸದ್ಯವೇ ಅವರು ಯಾವ ಸ್ಥಳಕ್ಕೆ ಮರಳಲಿದ್ದಾರೆಂದು ತಿಳಿದುಕೊಳ್ಳುವರು.

RELATED SURAHS